ನೇರ ನಿಷ್ಠುರವಾದಿ, ಕರ್ನಾಟಕದ ಸಾಕ್ಷಿ ಪ್ರಜ್ಞೆ ಎ .ಕೆ. ಸುಬ್ಬಯ್ಯ ಇನ್ನಿಲ್ಲ
ಬೆಂಗಳೂರು : ನಾಡಿನ ಹಿರಿಯ ರಾಜಕಾರಣಿ, ಪ್ರಗತಿಪರ ಹೋರಾಟಗಾರ, ಮಾಜಿ ಶಾಸಕ ಅಜ್ಜಿಕುಟೀರ ಕಾರ್ಯಪ್ಪ ಸುಬ್ಬಯ್ಯ- (ಎ ಕೆ ಸುಬ್ಬಯ್ಯ) ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಕಳೆದ ಒಂದು ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಸುಬ್ಬಯ್ಯ ಅವರನ್ನು ಇತ್ತೀಚೆಗೆ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತಾದರೂ ಸೋಮವಾರ ಸಂಜೆ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು ಎನ್ನಲಾಗಿದೆ.
ಶೋಷಿತರ ಪರ ಧ್ವನಿಯಾಗಿದ್ದ ಅವರು ಪ್ರಖರ ವಿಚಾರವಾದಿಯಾಗಿದ್ದರು. ರಾಜಕೀಯದಲ್ಲಿ ಯಾವುದೇ ಪಕ್ಷದಲ್ಲಿದ್ದರೂ ಕಾಯಂ ವಿರೋಧ ಪಕ್ಷದ ನಾಯಕನಂತೆ ಅಧಿಕಾರದಲ್ಲಿರುವ ಸರ್ಕಾರಗಳ ಮೇಲೆ ಚಾಟಿ ಬೀಸುತ್ತಿದ್ದರು.
1934 ಆಗಸ್ಟ್ 9 ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹುದಿಗೇರಿ ಗ್ರಾಮದ ಕೊಣಗೇರಿ ಅಜ್ಜಿಕುಟೀರ ಕಾರ್ಯಪ್ಪ ಹಾಗೂ ಚಿನ್ನಮ್ಮ ದಂಪತಿಯ ಏಕೈಕ ಪುತ್ರನಾಗಿ ಎ.ಕೆ.ಸುಬ್ಬಯ್ಯ ಜನಿಸಿದರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರಿಂದ ಸೋದರ ಮಾವನ ಆಸರೆಯಲ್ಲಿ ಬೆಳೆದ ಇವರು ಬಾಲ್ಯದಿಂದಲೇ ಶೋಷಣೆ, ಅನ್ಯಾಯದ ಪರ ಧ್ವನಿಯೆತ್ತುತ್ತಿದ್ದರು.
ಹರಿಹರ ಸಮೀಪದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಇವರಲ್ಲಿ ಹೋರಾಟದ ಕಿಚ್ಚು ಮೊಳಕೆ ಒಡೆಯಿತು. ಶ್ರೀಮಂಗಳ ಕಂದಾಯ ಕಚೇರಿಯಲ್ಲಿ ರೈತರಿಗೆ ಕಿರುಕುಳ ವಿಷಯವನ್ನು ಪ್ರಶ್ನಿಸಿದ್ದರ ಪರಿಣಾಮ ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಸೋಮವಾರಪೇಟೆ ತಾಲೂಕಿನ ಗೆಜ್ಜೆಹನಗೋಡಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ನಂತರ ಆರೋಗ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡಿದರು.
1963 ರಲ್ಲಿ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಿರಾಜಪೇಟೆಯಲ್ಲಿ ವಕೀಲಿ ವೃತ್ತಿ ಆರಂಭಿಸುವುದರ ಜೊತೆಗೆ ರಾಜಕೀಯದಲ್ಲಿಯೂ ತೊಡಗಿಸಿಕೊಂಡರು. 1959 ರಲ್ಲಿ ‘ಪ್ರಜಾ ಸೋಷಿಯಲಿಸ್ಟ್ ಪಾರ್ಟಿ’ ಅಭ್ಯರ್ಥಿಯ ಪರ ವಿರಾಜಪೇಟೆಯಲ್ಲಿ ಪ್ರಚಾರ ನಡೆಸಿದರು. 1966 ರಲ್ಲಿ ಜನಸಂಘದಿಂದ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿ ಒಟ್ಟು ನಾಲ್ಕು ಬಾರಿ ವಿಧಾನ ಪರಿಷತ್ತಿಗೆ ಇವರು ಆಯ್ಕೆಯಾಗಿದ್ದಾರೆ.
ನೇರ ನಿಷ್ಠುರವಾದಿ, ಚಳವಳಿಗಾರ, ಶೋಷಿತರಿಗೆ ಧ‍್ವನಿಯಾಗಿದ್ದ ಸುಬ್ಬಯ್ಯ ಹೋರಾಟದ ಹಾದಿಯಲ್ಲಿ ಬದುಕು ಸವೆಸಿದವರು.
ಜನಸಂಘದ ಮೂಲಕ ಬೆಳೆದು ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸಿದ ಸುಬ್ಬಯ್ಯ ಅವರಿಗೆ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಒಡನಾಟವಿತ್ತು. ವಿರಾಜಪೇಟೆಯ ಸುಬ್ಬಯ್ಯ ನಿವಾಸಕ್ಕೂ ವಾಜಪೇಯಿ ಭೇಟಿ ನೀಡಿದ್ದರು.
1982 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿದ್ದ ಸಂದರ್ಭದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ, ವಿ.ಎಸ್. ಆಚಾರ್ಯ ಸೇರಿದಂತೆ 18 ಮಂದಿ ಬಿಜೆಪಿ ಸದಸ್ಯರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಳಿಕ ಕಾರಣಾಂತರಗಳಿಂದ ಬಿಜೆಪಿಯಿಂದ ಇವರನ್ನು ಉಚ್ಚಾಟಿಸಲಾಯಿತು.
1984 ರ ಚುನಾವಣೆ ಬಳಿಕ ‘ಕನ್ನಡ ನಾಡು’ ಎಂಬ ಪ್ರಾದೇಶಿಕ ಪಕ್ಷ ಕಟ್ಟಿದರಾದರೂ ಆರ್ಥಿಕ ಸಂಕಷ್ಟಗಳಿಂದ ಪಕ್ಷ ಬೆಳೆಸಲಾಗದೇ ಕಾಂಗ್ರೆಸ್ ಸೇರುವಂತಾಯಿತು. ಬಿಎಸ್‍ಪಿ ಯಲ್ಲಿಯೂ ಕೆಲವು ವರ್ಷ ಗುರುತಿಸಿಕೊಂಡ ಇವರಿಗೆ ಹೋರಾಟಕ್ಕೆ ಮತ್ತೊಂದು ಆಯಾಮ ಸಿಕ್ಕಂತಾಯಿತು ಎಂಬ ಮಾತುಗಳಿವೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಸುಬ್ಬಯ್ಯ ಅನುಭವಿಸಿದ್ದರು.
ಆಸ್ಪತ್ರೆಯಿಂದ ಮೃತದೇಹವನ್ನು ಬುಧವಾರ ಕೊಡಗಿನ ಎಸ್ಟೇಟ್ ನಲ್ಲಿ ಕೊಡವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸುವುದಾಗಿ ಕುಟುಂದ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಬೆಂಬಲಿಸಿದ್ದರ ಪರಿಣಾಮ ಕೆಲವು ಸಂಘಟನೆಗಳ ವಿರೋಧಕ್ಕೂ ಇವರು ಗುರಿಯಾಗಬೇಕಾಯಿತು. ಸುಬ್ಬಯ್ಯ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
ನೇರ, ದಿಟ್ಟ ಮಾತುಗಳಿಂದ ಸಮಕಾಲೀನ ವಿದ್ಯಮಾನಗಳಿಗೆ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಾ ಆತ್ಮಸಾಕ್ಷಿಯಂತೆ ಸುಬ್ಬಯ್ಯ ಇದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಹೋರಾಟಗಾರ ಸುಬ್ಬಯ್ಯ ಅವರ ಸಾವಿನಿಂದಾಗಿ ತಾವು ವೈಯಕ್ತಿಕವಾಗಿ ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಕನ್ನಡ ನಾಡು ಒಳ್ಳೆಯ ಮಾರ್ದದರ್ಶಕನನ್ನು ಕಳೆದುಕೊಂಡು ಬಡವಾಗಿದೆ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.