ಕೊಡಗಿಗೆ ಸಿಎಂ ಬಿಎಸ್‌ವೈ ಭೇಟಿ : 100 ಕೋಟಿ ರೂ. ಇಂದೇ ಬಿಡುಗಡೆ ಭರವಸೆ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಹಾನಿಯಾಗಿದ್ದು, ಈ ಸಂಬಂಧ ಈಗಾಗಲೇ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಘೋಷಿಸಿದ 536 ಕೋಟಿ ರೂ. ವಿಶೇಷ ಪ್ಯಾಕೇಜ್‌ನಲ್ಲಿ ಪ್ರಥಮ ಹಂತದಲ್ಲಿ 100 ಕೋಟಿ ರೂ.ಗಳನ್ನು ಶುಕ್ರವಾರವೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ನೆರೆ ಪರಿಹಾರ ಕಾರ್ಯಗಳಿಗೆ ವಿಶೇಷ ಪ್ಯಾಕೆಜ್‌ನಲ್ಲಿ ಪ್ರಥಮ ಹಂತದಲ್ಲಿ ತಕ್ಷಣ ರೂ.100 ಕೋಟಿ ಬಿಡುಗಡೆಗೊಳಿಸಲಾಗುವುದು ಎಂದರು. ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದ ಸಂದರ್ಭ ಕೂಡಿಗೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.

ಜಿಲ್ಲಾಡಳಿತದ ಖಾತೆಯಲ್ಲಿರುವ ಹಣವನ್ನು ತಕ್ಷಣ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು ಭೂಕುಸಿತದಿಂದ ನಾಪತ್ತೆಯಾದವರ ಕುಟುಂಬಕ್ಕೆ ತಕ್ಷಣ ಒಂದು ಲಕ್ಷ ಪರಿಹಾರ ನೀಡುವುದು, ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಒದಗಿಸುವಂತೆ ನಿರ್ದೇಶನ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಒಟ್ಟು 536 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಹಿಂದೆ ಘೋಷಣೆ ಮಾಡಲಾಗಿದೆ. ಇದರಲ್ಲಿ ಪ್ರಥಮ ಹಂತದಲ್ಲಿ ತಕ್ಷಣ ರೂ.100 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ಕೇಂದ್ರದಿಂದ ಆಗಮಿಸಿದ ನೆರೆ ಅಧ್ಯಯನ ಅಧಿಕಾರಿಗಳ ತಂಡದ ವರದಿಗಳ ಆಧಾರದ ಮೇರೆಗೆ ಕೇಂದ್ರದಿಂದ ಇನ್ನೂ ಅಧಿಕ ಮೊತ್ತದ ಪರಿಹಾರ ಬಿಡುಗಡೆಗೊಳ್ಳಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರಮೋದಿಯವರಿಗೆ ಮನವರಿಕೆ ಮಾಡಿಕೊಡಲಾಗುವುದು. ಸೂರು ಕಳೆದುಕೊಂಡವರಿಗೆ ಪರ್ಯಾಯ ವಸತಿ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಸೂಕ್ತ ಸ್ಥಳ ಗುರುತಿಸಿದೆ. ಶಾಶ್ವತ ಪರಿಹಾರ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಶಾಸಕದ್ವಯರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಕೂಡಿಗೆ ಸೈನಿಕ ಶಾಲೆಯ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡರು.
ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಜಿಲ್ಲೆಯಲ್ಲಿ ಉಂಟಾದ ಹಾನಿಗಳ ಬಗ್ಗೆ ಮಾಹಿತಿ ಒದಗಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಅರಣ್ಯ ಇಲಾಖೆಯನ್ನು ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ಆರೋಪಿಸಿದರಲ್ಲದೆ, ಕಾಫಿ ತೋಟ, ಗದ್ದೆಗಳಲ್ಲಿ ಉರುಳಿ ಬಿದ್ದ ಮರವನ್ನು ಸಾಗಿಸಿ ಮಾರಾಟ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಕಲ್ಪಿಸುತ್ತಿಲ್ಲ. ಎಲ್ಲವನ್ನು ಕಳೆದುಕೊಂಡವರು ಕನಿಷ್ಠ ತಮ್ಮ ಸ್ವಂತ ಮರಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವಂತಾಗಬೇಕು. ಕಾಫಿ ಬೆಳೆಗಾರರ ಸಾಲಮನ್ನಾ ಮಾಡಬೇಕು. ಜಮೀನಿನಲ್ಲಿ ತುಂಬಿರುವ ಮರಳನ್ನು ಕೂಡ ಮಾರಾಟ ಮಾಡಲು ರೈತರಿಗೆ ತಡೆಯೊಡ್ಡದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇರದೊಂದಿಗೆ ಹಾರಂಗಿ ಜಲಾಶಯದಿಂದ ಹೂಳೆತ್ತಲು ಕೂಡಲೆ ಕ್ರಮಕೈಗೊಳ್ಳಬೇಕು ಎಂದು ಕೋರಿಕೊಂಡರು.

ಮಡಿಕೇರಿ ವಿಭಾಗ ಡಿಎಫ್‌ಒ ಜನಪ್ರತಿನಿಧಿಗಳೊಂದಿಗೆ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಶಾಸಕರ ಕರೆಗಳಿಗೆ ಮನ್ನಣೆ ನೀಡುತ್ತಿಲ್ಲ. ಅರಣ್ಯ ನಡುವೆ ವಿದ್ಯುತ್ ಸಂಪರ್ಕ ಸಂದರ್ಭ ಇನ್ಸುಲೇಟಡ್ ಲೈನ್ ಅಳವಡಿಕೆ ಹೆಸರಿನಲ್ಲಿ ಮಾಲ್ದಾರೆ ಗಿರಿಜನರ ಹಾಡಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಬಾಡಗದಲ್ಲಿ ಬೆಳೆಗಾರರೊಬ್ಬರ ಮನೆಗೆ ನುಗ್ಗಿ ಅರಣ್ಯ ಇಲಾಖೆ ದೌರ್ಜನ್ಯ ಎಸಗಿದೆ ಎಂದು ಗಂಭೀರ ಆರೋಪ ಮಾಡಿದರು.

ಡಿಎಫ್‌ಓ ಮತ್ತು ಸೆಸ್ಕ್ ಅಧಿಕಾರಿಗಳಿಂದ ವಿವರ ಬಯಸಿದ ಸಿಎಂ ಡಿಎಫ್‌ಒ ಪ್ರಭಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜನತೆ ಸಂಕಷ್ಟದಲ್ಲಿರುವ ಸಂದರ್ಭ ಇಲಾಖಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅವಶ್ಯಕತೆಯಿಲ್ಲ. ಕಾನೂನಾತ್ಮಕವಾಗಿ ಶಾಶ್ವತ ವ್ಯವಸ್ಥೆ ಕಲ್ಪಿಸುವವರೆಗೆ ಪರ್ಯಾಯ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು. ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಿ ಮುಂದಿನ 15 ದಿನಗಳ ಒಳಗಾಗಿ ಶಾಶ್ವತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಆದೇಶಿಸಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಹಾನಿ ಉಂಟಾಗಿಲ್ಲ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಹಾನಿಯನ್ನು ತಡೆದಿದ್ದು ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು. ಕಾವೇರಿ ನದಿ ತಟದಲ್ಲಿ ಮನೆ ಕಟ್ಟಿಕೊಂಡವರಿಗೆ ಪರ್ಯಾಯವಾಗಿ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕಿದೆ. ಸರಕಾರಿ ಜಾಗವನ್ನು ಗುರುತಿಸಿ ಸ್ಥಳಾಂತರಿಸಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ರಸ್ತೆ ದುರಸ್ಥಿ ಕಾಮಗಾರಿಗಳು ತುರ್ತಾಗಿ ಆಗಬೇಕಿದೆ ಎಂದರು.

ಸಭೆಯಲ್ಲಿ ಸಚಿವರುಗಳಾದ ಆರ್.ಅಶೋಕ್, ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಸಿಇಒ ಲಕ್ಷ್ಮಿಪ್ರಿಯ, ಸದಸ್ಯರಾದ ಚಂದ್ರಕಲಾ, ಮಂಜುಳಾ, ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು.

ಕೊಡಗಿಗೆ ಹೆಲಿಕಾಫ್ಟರ್ ಮೂಲಕ ಬಂದಿಳಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಜಿಲ್ಲಾಧಿಕಾರಿಗಳು ಬರಮಾಡಿಕೊಂಡರು. ಸಭೆಯ ಬಳಿಕ ಸಿಎಂ ರಸ್ತೆ ಮೂಲಕ ನೆಲ್ಲಿಹುದಿಕೇರಿಗೆ ತೆರಳಿದರು.

ಪರಿಹಾರ ಕೇಂದ್ರಕ್ಕೆ ಮುಖ್ಯಮಂತ್ರಿ ಭೇಟಿ
ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆಲ್ಯಹುದಿಕೇರಿಯ ಪರಿಹಾರ ಕೇಂದ್ರಕ್ಕೆ ತೆರಳಿ ಸಂತ್ರಸ್ತರ ಅಹವಾಲು ಆಲಿಸಿದರು. ಕರಡಿಗೋಡು, ಕುಂಬಾರಗುಂಡಿ ಮತ್ತಿತರ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಾಜ್ ಕುಮಾರ್ ಖತ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ತಹಶೀಲ್ದಾರ್ ಪುರಂದರ, ಗೋವಿಂದರಾಜು, ಮಹೇಶ್, ಕುಶಾಲನಗರ ಪ.ಪಂ.ಮುಖ್ಯಾಧಿಕಾರಿ ಜೀವನ್ ಕುಮಾರ್, ನಾನಾ ಇಲಾಖೆ ಅಧಿಕಾರಿಗಳು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!