ದೃಶ್ಯ ಮಾಧ್ಯಮಗಳು ಮೌಢ್ಯ ಸಾರಲು ಸ್ಪರ್ಧೆಗಳಿದಿದೆ: ಸಾಣೆಹಳ್ಳಿ ಶಿವಾಚಾರ್ಯ ಸ್ವಾಮೀಜಿ
ಉಡುಪಿ: ಸಮಾಜದಲ್ಲಿ ಮೌಢ್ಯ ವಿಸ್ತಾರವಾಗಿ ಹರಡಿಕೊಂಡಿದೆ. ದೃಶ್ಯ ಮಾಧ್ಯಮಗಳು ಮೌಢ್ಯ ಸಾರಲು ಸ್ಪರ್ಧೆಗಳಿದಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಬುದ್ಧಿಯ ಸದ್ಭಳಕೆ ಮಾಡಿಕೊಂಡರೆ ಮೌಢ್ಯಗಳಿಂದ ದೂರ ಇರಬಹುದು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಪುರಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಚಾರವಂತ, ಸತ್ಯವಂತ, ಪ್ರಾಮಾಣಿಕನಾಗಿ ಬದುಕಿದರೆ ಗುಡಿಯ ದೇವರ ಪೂಜಿಸುವ ಅಗತ್ಯವಿಲ್ಲ. ನಾವೇ ದೇವರಂತೆ. ಆದರೆ, ಮನುಷ್ಯರು ತಮ್ಮನ್ನು ದೆವ್ವಗಳು ಎಂದು ಭಾವಿಸಿದ್ದಾರೆ. ಇಂತಹ ತಪ್ಪು ಕಲ್ಪನೆಯನ್ನು ತೊಡೆದುಹಾಕಬೇಕಿದೆ’ ಎಂದರು.
ವಚನ ಸಾಹಿತ್ಯದ ಬೀಜವನ್ನು ಯುವಪೀಳಿಗೆಯ ತಲೆಯಲ್ಲಿ ಬಿತ್ತುವುದೇ ‘ಮತ್ತೆ ಕಲ್ಯಾಣ’ದ ಉದ್ದೇಶ. ಕುಲ ಎಂದರೆ ಜಾತಿ ಸೂಚಕವಲ್ಲ. ನೀರಿಗೆ, ಗಾಳಿಗೆ, ನೆಲಕ್ಕೆ ಜಾತಿಯ ಬೇಧ ಇಲ್ಲ. ಅರಿವು ಹಾಗೂ ಆಚಾರ ಒಂದಾದರೆ ಜಾತಿ ಎಂಬ ಭೂತವನ್ನು ದೂರವಿಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನೀತಿಯಿಂದ ನಡೆದುಕೊಂಡವ ಶ್ರೇಷ್ಠ. ದುರಾಚಾರದಿಂದ ನಡೆದುಕೊಂಡವ ಕನಿಷ್ಠ. ಗುಡಿ ಸುತ್ತಲು, ಮರ ಸುತ್ತಲು ಶರಣರು ಹೇಳಿಲ್ಲ. ಸದಾಚಾರದಲ್ಲಿ ಸಾಗುವವರು ಮಾತ್ರ ಭಕ್ತರು ಎಂದು ಶರಣರು ಹೇಳಿದ್ದಾರೆ. ಈ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಸಾಹಿತಿ ನಾ.ಮೊಗಸಾಲೆ ಮಾತನಾಡಿ, ‘ವಚನಗಳು ಎಂದರೆ, ಪ್ರತಿಜ್ಞೆ, ಬದ್ಧತೆ. ನುಡಿದಂತೆ ನಡೆಯುವುದೇ ಧರ್ಮ ಪಾಲನೆ. ವಿನಯ ಇಲ್ಲದ ಧರ್ಮ ಇಲ್ಲ’ ಎಂದು ಅಭಿಪ್ರಾಯಪಟ್ಟರು.
ವಚನ ಧರ್ಮವು ಸಂಸ್ಕೃತಿಯಿಂದ ಹುಟ್ಟಿ, ಅದನ್ನು ಬೆಳೆಸಿ, ಉಳಿಸುವ ಧರ್ಮವಾಗಿದೆ. ಧರ್ಮ ಎಂದರೆ ಪ್ರಾಣಿ ಸ್ವರೂಪದಿಂದ ಮನುಷ್ಯತ್ವದೆಡೆಗಿನ ಬದಲಾವಣೆ. ಮನಃಸಾಕ್ಷಿಗಿಂತ ದೊಡ್ಡ ಧರ್ಮ ಜಗತ್ತಿನಲ್ಲಿ ಇಲ್ಲ ಎಂದು ಪ್ರತಿಪಾದಿಸಿದರು. ಆದರೆ, ಪ್ರಸ್ತುತ ಯಾವುದು ಅಧರ್ಮವೋ ಅದನ್ನೇ ಧರ್ಮ ಎಂದು ನಂಬಲಾಗುತ್ತಿದೆ. ಪುರೋಹಿತರು ಹೇಳಿದ್ದೇ ಧರ್ಮ ಎಂದು ಜನರು ಭಾವಿಸಿ ಅನುಸರಿಸುತ್ತಿದ್ದಾರೆ. ಸಮಾಜದಲ್ಲಿ ಜವನ ಮೌಲ್ಯ ಮರೆಯಾಗಿದೆ ಎಂದು ವಿಷಾಧಿಸಿದರು.
ಚಿಂತಕರಾದ ಜಿ.ಎಸ್.ನಾಗರಾಜ್ ಮಾತನಾಡಿ, ‘ಭಾರತ ದೇಶದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಇದೆ. ಆದರೆ, ಇಲ್ಲಿನ ಮೌಢ್ಯದ ಬಗ್ಗೆ
ತುಂಬಾ ನೋವಿದೆ. 21ನೇ ಶತಮಾನದಲ್ಲಿಯೇ ಮೌಢ್ಯತೆ, ಜಾತೀಯತೆ ಹೆಚ್ಚಿರುವಾಗ 12ನೇ ಶತಮಾನದಲ್ಲಿದ್ದ ಸ್ಥಿತಿಯನ್ನು ಊಹಿಸಿಕೊಂಡರೆ ಭಯವಾಗುತ್ತದೆ’ ಎಂದರು.
ಶರಣರು ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಹೇಳಿದ್ದರು. ಆದರೆ, ಇಂದು ಸಮಾಜದಲ್ಲಿ ದಯೆಯನ್ನು ಹುಡುಕಬೇಕಾದ ಪರಿಸ್ಥಿತಿ ಇದೆ. ವಚನ ಸಾಹಿತ್ಯದ ತಿಳಿವಳಿಕೆ ಎಲ್ಲರಿಗೂ ಸಿಗಬೇಕು. ಎಲ್ಲರನ್ನೂ ಒಳಗೊಂಡು ಸಾಗುವುದೇ ಧರ್ಮ ಎಂದರು.
ಜನತಂತ್ರ ವ್ಯವಸ್ಥೆಗೆ ಇಂಬುಕೊಟ್ಟವರು ಬಸವಣ್ಣ. ಮತದಾರರು ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸದಿದ್ದರೆ, ಜನತಂತ್ರ ವ್ಯವಸ್ಥೆ ವಿಫಲವಾಗುತ್ತದೆ ಎಂದರು.
ನಗರದ ಪುರಭವನದಲ್ಲಿ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಾತನಾಡಿದ ಮಾಜಿ ಶಾಸಕ ವೈ ಎಸ್ ದತ
ಅವರು, ಆಯಾ ಕಾಲಘಟ್ಟಕ್ಕೆ ಪ್ರಜಾಪ್ರಭುತ್ವ ಮೇಲುಗೈ ಸಾಧಿಸಿದೆ. 18ನೇ ಶತಮಾನದಲ್ಲಿ ಬಡವರು ಹಾಗೂ ಶ್ರೀಮಂತರ ನಡುವಿನ ಸಂಘರ್ಷವಾದ ಫ್ರಾನ್ಸ್ ಮಹಾಕ್ರಾಂತಿ ನಡೆಯಿತು. 20ನೇ ಶತಮಾನದಲ್ಲಿ ರಷ್ಯಾ ಕ್ರಾಂತಿ ನಡೆಯಿತು. ಇವೆಲ್ಲಕ್ಕಿಂತಲೂ ಮಿಗಿಲಾದುದು ಬಸವಣ್ಣನವರ ಜನತಂತ್ರದ ಕ್ರಾಂತಿ ಎಂದರು.
ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ‘12ನೇ ಶತಮಾನದಲ್ಲೂ ಸಮಾಜ ದಿಕ್ಕು ತಪ್ಪಿತ್ತು. ಆದರೆ, ಜನರಿಗೆ ತಿಳಿವಳಿಕೆ ನೀಡಿದರೆ ಬದಲಾವಣೆ ಸಾಧ್ಯ ಎಂದು ಬಸವಣ್ಣ ನಂಬಿದ್ದರು. ಅದರಂತೆ ಕಾಯಕಜೀವಿಗಳ ನೆರವಿನಿಂದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.
ಪ್ರಸ್ತುತ ನಾಡಿನ ಹಲವು ಮಠಾಧಿಪತಿಗಳಿಗೆ, ರಾಜಕಾರಣಿಗಳಿಗೆ ಸಿರಿ ಎಂಬ ಗರ ಬಡಿದಿದೆ. ನಾಗರಿಕ ಹಾಗೂ ಮತದಾರ ಜಾಗೃತನಾದರೆ ಮಠಾಧಿಪತಿಗಳು ರಾಜಕಾರಣಿಗಳಿಗೆ ಹಿಡಿದ ಗರ ಬಿಟ್ಟು, ಜಾಗೃತರಾಗುತ್ತಾರೆ ಎಂದು ಕಿವಿಮಾತು ಹೇಳಿದರು.
ಮತದಾರರು ಆಮಿಷದ ಸೆಳೆತಕ್ಕೆ ಸಿಕ್ಕಿರುವುದು ದುರಂತ. ಮೊದಲು ಮತದಾರ ಬದಲಾದರೆ, ನೇತಾರ ತಾನಾಗೇ ಬದಲಾಗುತ್ತಾನೆ. ಬಸವತತ್ವವನ್ನು ಅರಿತು ಆಚರಣೆಗೆ ತರುವ ಮನಸ್ಸು ಮತದಾರ ಹಾಗೂ ನೇತಾರರಿಗೆ ಇದ್ದಿದ್ದರೆ ರಾಜ್ಯ ಹೊನ್ನಿನ ನಾಡಾಗುತ್ತಿತ್ತು ಎಂದರು.
ತಾತ್ವಿಕ ಬದ್ಧತೆ ಇಲ್ಲದಿದ್ದರೆ ಬದುಕು ನರಕವಾಗುತ್ತದೆ. ಜನ ಮೆಚ್ಚುವುದಕ್ಕಿಂತ ಮನ ಮೆಚ್ಚುವಂತೆ ನಡೆದುಕೊಳ್ಳಬೇಕು. ಖಾದಿ ಖಾಕಿ, ಖಾವಿ ಕೇವಲ ಬಟ್ಟೆಯಲ್ಲ; ತ್ಯಾಗ, ಪ್ರಾಮಾಣಿಕತೆ ಹಾಗೂ ಸತ್ಯದ ಸಂಕೇತ. ಇಂಥವುಗಳನ್ನು ಧರಿಸಿ ದಾರಿತಪ್ಪಿ ನಡೆದುಕೊಂಡರೆ ಭಗವಂತ ಒಲಿಯುವುದಿಲ್ಲ ಎಂದು ಟೀಕಿಸಿದರು.
ವ್ಯಕ್ತಿ ಆತ್ಮಶುದ್ಧಿ ಮಾಡಿಕೊಂಡರೆ, ತಾನಾಗಿಯೇ ಲೋಕಶುದ್ಧಿಯಾಗುತ್ತದೆ. ಇದರ ಅರಿವನ್ನು ಮೂಡಿಸಲು ನಾಡಿನಾದ್ಯಂತ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಉಪಸ್ಥಿತರಿದ್ದರು.