ಯುದ್ಧ ವಿಮಾನ ನೌಕೆಯ ಹಾರ್ಡ್ ವೇರ್ ಕಳ್ಳತನ:ಆತಂಕ ಸೃಷ್ಟಿ

ಕೊಚ್ಚಿ: ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ತಯಾರಾಗುತ್ತಿರುವ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಯುದ್ಧ ವಿಮಾನವಾಹಕ ನೌಕೆಯಲ್ಲಿ ಹಾರ್ಡ್ ವೇರ್ ಕಳ್ಳತನ ರಕ್ಷಣಾ ತಜ್ಞರ ನಿರೀಕ್ಷೆಯನ್ನೂ ಮೀರಿದ್ದಾಗಿದ್ದು, ದೇಶದ ಭದ್ರತಾ ವ್ಯವಸ್ಥೆ ಮೇಲೆ ಆತಂಕ ಸೃಷ್ಟಿ ಮಾಡಿದೆ.

ತಜ್ಞರ ಅಭಿಪ್ರಾಯದಂತೆ ಪ್ರಸ್ತುತ ಕಳ್ಳತನವಾಗಿರುವ ಹಾರ್ಡ್ ವೇರ್ ಯುದ್ಧ ವಿಮಾನ ವಾಹಕದ ನಿರ್ಣಾಯಕ ನಿಯಂತ್ರಣ ವ್ಯವಸ್ಥೆಗೆ ಸೇರಿದ್ದಾಗಿದೆ ಎಂದು ಹೇಳಲಾಗಿದೆ. ಈ ಕುರಿತಂತೆ ಮಾಹಿತಿಯನ್ವಯ, ನೌಕೆಯಲ್ಲಿನ ಒಂದು ಪ್ರಮುಖ ಕಂಪ್ಯೂಟರ್, 10 ಹಾರ್ಡ್ ಡಿಸ್ಕ್ ಗಳು, ಮೂರು ಸಿಪಿಯುಗಳು ಮತ್ತು ಪ್ರೊಸೆಸರ್ ಗಳು ನಾಪತ್ತೆಯಾಗಿವೆ. ಇವಿಷ್ಟೂ ಉಪಕರಣಗಳು ಆಗಸ್ಟ್ 29ರಿಂದ ಸೆಪ್ಟೆಂಬರ್ 12ರ ಅವಧಿಯಲ್ಲಿ ಕಳ್ಳತನವಾಗಿರುವ ಸಾಧ್ಯತೆ ಇದೆ.

ಇನ್ನು ತಂತ್ರಾಂಶಗಳು ನಾಪತ್ತೆಯಾಗಿ 2 ವಾರಕ್ಕೂ ಅಧಿಕ ಸಮಯವೇ ಕಳೆದರೂ ಈ ಬಗ್ಗೆ ಯಾರಿಗೂ ಅನುಮಾನ ಬಾರದೇ ಇದ್ದದ್ದು, ಕಳ್ಳರ ಚಾಣಾಕ್ಷತನಕ್ಕೆ ಹಿಡಿದ ಕೈಗನ್ನಡಿ. ಅಲ್ಲದೆ ಈ ತಂತ್ರಾಂಶಗಳಲ್ಲಿರುವ ಅತಿ ಮುಖ್ಯವಾದ ಮಾಹಿತಿಗಳನ್ನು ಸಂಗ್ರಹಿಸಲು ಈ ಸಮಯ ಅತೀ ಹೆಚ್ಚು. ಕಳ್ಳರು ಅನಾಯಾಸವಾಗಿ ತಮ್ಮ ಕಳ್ಳತನದ ಗುರಿ ಸಾಧಿಸಿರುತ್ತಾರೆ. ತಂತ್ರಾಂಶಗಳಲ್ಲಿರುವ ಮಾಹಿತಿಗಳು ಈಗಾಗಲೇ ಹೊರದೇಶದ ರಕ್ಷಣಾ ಮಾಫಿಯಾ ಕೈ ತಲುಪಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹೀಗಾಗಿ ಇಡೀ ದೇಶದ ಭದ್ರತಾ ವ್ಯವಸ್ಥೆಯ ಮೇಲೆಯೇ ಇದೀಗ ಆತಂಕ ಮೂಡುವಂತಾಗಿದೆ. 

ಭದ್ರತಾ ಏಜೆನ್ಸಿ ಮೇಲೆ ಸಂಶಯ
ಇನ್ನು ಐಎನ್ಎಸ್ ವಿಕ್ರಾಂತ್ ನಲ್ಲಿನ ಹಾರ್ಡ್ ವೇರ್ ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳು ಖಾಸಗಿ ಭದ್ರತಾ ಏಜೆನ್ಸಿ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಿರುವನಂತಪುರಂ ಮೂಲದ ಖಾಸಗಿ ಭದ್ರತಾ ಏಜೆನ್ಸಿಯೊಂದು ಐಎನ್ಎಸ್ ವಿಕ್ರಾಂತ್ ಭದ್ರತಾ ಮೇಲ್ವಿಚಾರಣೆ ವಹಿಸಿಕೊಂಡಿತ್ತು. ಇದಕ್ಕಾಗಿ ತನ್ನ ಒಟ್ಟು 82 ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಿತ್ತು. ಐಎನ್ಎಸ್ ವಿಕ್ರಾಂತ್ ನಿರ್ಮಾಣವಾಗುತ್ತಿರುವ ಕೊಚ್ಚಿನ್ ಶಿಪ್ ಯಾರ್ಡ್ ಗೆ ಆಗಮಿಸುವವರನ್ನು ಪರೀಕ್ಷಿಸಿ ಒಳಗೆ ಬಿಡುವ ಕಾರ್ಯವನ್ನು ಇದೇ ಏಜೆನ್ಸಿಯ ಸಿಬ್ಬಂದಿಗಳು ಮಾಡುತ್ತಿದ್ದರು. ಅಲ್ಲದೆ ಶಿಪ್ ಯಾರ್ಡ್ ನಲ್ಲಿನ ಸಿಸಿಟಿವಿ ವೀಕ್ಷಣಾ ಜವಾಬ್ದಾರಿಯನ್ನೂ ಕೂಡ ಇದೇ ಸಂಸ್ಥೆಗೆ ವಹಿಸಲಾಗಿತ್ತು. ಇದೇ ಕಾರಣಕ್ಕೆ ಈ ಭದ್ರತಾ ಏಜೆನ್ಸಿಯ ಮೇಲೂ ತನಿಖಾಧಿಕಾರಿಗಳು ಕಣ್ಣಿರಿಸಿದ್ದಾರೆ. ಭದ್ರತಾ ಏಜೆನ್ಸಿಯ ಪ್ರತೀ ಚಲನವಲನವನ್ನು ಅಧಿಕಾರಿಗಳು ಹದ್ದಿನ ಕಣ್ಣಿನಿಂದ ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!