ಕರಾವಳಿಗೆ ಮತ್ತೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಉಡುಪಿ : ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅ.27ರಂದು ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಗಂಟೆಗೆ 40ರಿಂದ 60 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಸೋಮವಾರದವರೆಗೆ ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ. ಉಳಿದ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ಗುಡುಗು ಸಿಡಿಲು ಹೆಚ್ಚಾಗಿ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಶನಿವಾರ ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 24 ಸೆಂ.ಮೀ.ಮಳೆಯಾಗಿದೆ. ಗೋಕರ್ಣ 18, ಕೋಟ 16, ಅಂಕೋಲಾ 15, ಕಾರವಾರ 14, ಕೊಲ್ಲೂರು, ಕೊಟ್ಟಿಗೆಹಾರ 11, ಹೊನ್ನಾವರ 10, ಮಂಗಳೂರು 9, ಭಾಗಮಂಡಲ 8, ಉಡುಪಿ, ಕುಂದಾಪುರ , ಬೆಳ್ತಂಗಡಿಯಲ್ಲಿ ತಲಾ 7 ಸೆಂ.ಮೀ.ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಬೀಸಿದ ಬಿರುಗಾಳಿಗೆ ಪೊಳಲಿಗೆ ಬಳಿ ಬಡಗಬೆಳ್ಳೂರು ಗ್ರಾಮದ ಪರಿಮೊಗರಿನಲ್ಲಿ ಅಡಿಕೆ ತೋಟಕ್ಕೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ವಿಟ್ಲ ಸಮೀಪದ ಸೇರಾಜೆಯಲ್ಲಿ ಮನೆ ಮೇಲೆ ಮರಬಿದ್ದು ವ್ಯಕ್ತಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಡುಪಿಯಲ್ಲಿಯೂ ಮಳೆ ಧಾರಾಕಾರವಾಗಿ ಸುರಿದಿದ್ದು, ಯಾವುದೇ ಅನಾಹುತ ಆಗಿಲ್ಲ.
ಕಾಸರಗೋಡು ಜಿಲ್ಲೆಯಲ್ಲೂ ಅಬ್ಬರದ ಗಾಳಿ–ಮಳೆ ಸುರಿದಿದ್ದು, ಹಲವೆಡೆ ಮರ, ವಿದ್ಯುತ್ ಕಂಬಗಳು ಉರುಳಿವೆ. ನೆಲ್ಲಿಕುಂಜೆಯಲ್ಲಿ ಹಲವು ಮರಗಳು ಉರುಳಿ ಬಿದ್ದಿದ್ದು, 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಮೀನುಗಾರಿಕೆ ದೋಣಿಗಳು ಬಂದರಿನಲ್ಲಿಯೇ ಉಳಿದಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಬಂದರಿನಲ್ಲಿ 120 ಹಾಗೂ ಕಾರವಾರ ಬಂದರಿನಲ್ಲಿ 50ಕ್ಕೂ ಹೆಚ್ಚು ದೋಣಿಗಳು ಲಂಗರು ಹಾಕಿವೆ ಎಂದು ಕರಾವಳಿ ಕಾವಲು ಪಡೆ ಕಮಾಂಡೆಂಟ್ ಎಸ್.ಎಸ್. ದಸಿಲ್ ತಿಳಿಸಿದ್ದಾರೆ.
ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಶನಿವಾರ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ, ಚಂಡಮಾರುತ ಶನಿವಾರ ಕಡಿಮೆಯಾಗಿದೆ.