ಕಾರ್ಕಳ:ವೇತನಕ್ಕೆ ಆಗ್ರಹಿಸಿ ತಾಲೂಕು ಆಸ್ಪತ್ರೆ ನೌಕರರ ಪ್ರತಿಭಟನೆ

ಕಾರ್ಕಳ : ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಕಳ ತಾಲೂಕು ಆಸ್ಪತ್ರೆಯ ಡಿ ದರ್ಜೆ ನೌಕರರು ಕಳೆದ 3 ತಿಂಗಳ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಮೈಸೂರಿನ ಸ್ವಿಸ್ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿರುವ 9 ಜನ ಡಿ ಗ್ರೂಪ್ ನೌಕರರು ಕಳೆದ10 ವರ್ಷಗಳಿಂದ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ಇವರಿಗೆ ೩ ತಿಂಗಳಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಅವರು ಕಂಪೆನಿ ವಿರುದ್ಧ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಡಿ ಗ್ರೂಪ್ ನೌಕರರಿಗೆ ತಲಾ 9200 ರಂತೆ 3 ತಿಂಗಳಿಂದ ವೇತನ ಪಾವತಿಯಾಗುತ್ತಿಲ್ಲ. ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಾವು ಈವರೆಗಿನ ವೇತನವನ್ನು ಗುತ್ತಿಗೆ ಪಡೆದಿರುವ ಏಜೆನ್ಸಿಗೆ ನೀಡಿರುವುದಾಗಿ ಹೇಳಿದ್ದರೆ, ಇತ್ತ ಗುತ್ತಿಗೆ ಪಡೆದಿರುವ ಏಜೆನ್ಸಿಯ ಮಾಲಿಕ ತನಗೆ ಕಳೆದ 6 ತಿಂಗಳಿನಿಂದ ಇಲಾಖೆಯಿಂದ ಸಿಬ್ಬಂದಿಗಳ ವೇತನ ಪಾವತಿಯಾಗಿಲ್ಲ. ಆದರೂ ಸಿಬ್ಬಂದಿಗಳ ಹಿತದೃಷ್ಟಿಯಿಂದ 3 ತಿಂಗಳ ವೇತನವನ್ನು ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸ್ಥೆ ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳ ಈ ಗೊಂದಲದ ಹೇಳಿಕೆಯಿಂದ ನೌಕರರು ವೇತನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಗುತ್ತಿಗೆ ಪಡೆದಿರುವ ಸ್ವಿಸ್ ಏಜೆನ್ಸಿಯ ಮಾಲಿಕ ನಾಗರಾಜ್ ಅವರನ್ನು ಸಂಪರ್ಕಿಸಿದಾಗ ಈಗಾಗಲೇ ಇಲಾಖೆಯಿಂದ ಜುಲೈವರೆಗಿನ ವೇತನವನ್ನು ಬ್ಯಾಂಕ್ ಮೂಲಕ ಸಿಬ್ಬಂದಿಗಳ ಖಾತೆಗೆ ಜಮಾ ಮಾಡಲಾಗಿದೆ.ಇನ್ನುಳಿದ 2 ತಿಂಗಳ ವೇತನವನ್ನು ಬಿಡುಗಡೆಗೊಳಿಸುವಂತೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಡಿಎಚ್‌ಓ ಅವರನ್ನು ಒತ್ತಾಯಿಸಿ ನೌಕರರ ಹಿತ ಕಾಯಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಆದರೆ ಹೊಗುತ್ತಿಗೆ ನೌಕರರು ತಮಗೆ ವೇತನ ಸಿಗದ ಹೊರತಾಗಿ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕನಿಷ್ಟ ವೇತನಕ್ಕಿಂತಲೂ ಕಡಿಮೆ ಸಂಬಳಕ್ಕಾಗಿ ದುಡಿಯುತ್ತಿರುವ ನೌಕರರ ಸಂಕಷ್ಟವನ್ನು ಅರಿತು ಸರಕಾರ ಹಾಗೂ ಅಧಿಕಾರಿಗಳು ತಕ್ಷಣವೇ ಬಾಕಿ ಉಳಿದ ವೇತನವನ್ನು ಪಾವತಿಸಿ ನೌಕರರ ಹಿತ ಕಾಯಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!