ಕೊರೋನಾ: ದೇಶದಲ್ಲಿ ಗುಣಮುಖರ ಪ್ರಮಾಣ ಶೇ.25.43ಕ್ಕೆ ಏರಿಕೆ
ನವದೆಹಲಿ: ಮಾರಕ ಕೊರೋನಾ ವೈರಸ್ ಮೇಲಿನ ಹಿಡಿತವನ್ನು ಭಾರತ ಮತ್ತಷ್ಟು ಬಿಗಿಗೊಳಿಸಿದ್ದು, ದೇಶದಲ್ಲಿ ವೈರಸ್ ಸೋಂಕಿತರ ಪೈಕಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.25.43ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರದ ಮಟ್ಟದಲ್ಲಿ ಸಿದ್ದತೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ದೇಶದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಾತ್ರ ಇಳಿಕೆಯಾಗುತ್ತಿಲ್ಲ. ದೇಶಾದ್ಯಾಂತ ಕಳೆದ 24 ಗಂಟೆಗಳಲ್ಲಿ 1,993 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 35,043 ಏರಿಕೆಯಾಗಿದ್ದು, ಈವರೆಗೂ 8,889 ಮಂದಿ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 1,147ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗುಣಮುಖರ ಪ್ರಮಾಣ ಶೇ.25.43ಕ್ಕೆ ಏರಿಕೆ
ಸೋಂಕಿನಿಂದ ಚೇತರಿಸಿಕೊಂಡು ಇಂದು 554 ಮಂದಿ ಬಿಡುಗಡೆ ಹೊಂದಿದ್ದು, ಗುಣಮುಖ ಹೊಂದಿದವರ ಪ್ರಮಾಣ 25.43 ಏರಿಕೆಯಾಗಿದೆ ಎಂದು ಅವರು ವಿವರಿಸಿದರು. ಇನ್ನೂ ದೇಶದಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಇಲ್ಲ. ಸರಕು ಸಾಗಾಣಿಕೆಯ ಟ್ರಕ್ಕುಗಳಿಗೆ ಅನುಮತಿ ನೀಡಬೇಕೆಂದು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ. 62 ಲಕ್ಷ ಟನ್ ಆಹಾರ ಧಾನ್ಯಗಳನ್ನು ರಾಜ್ಯಗಳು ಸಂಗ್ರಹಿಸಿವೆ. ಸರಕು ಸಾಗಾಣಿಕೆಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರಗಳು ಸಹಕರಿಸಬೇಕು ಎಂದು ಕೋರಲಾಗಿದೆ. ವಿದ್ಯಾರ್ಥಿಗಳು, ವಲಸೆ ಕೂಲಿ ಕಾರ್ಮಿಕರು ಸ್ವಸ್ಥಳಗಳಿಗೆ ತೆರಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.