ದೆಹಲಿಯಲ್ಲಿ ಒಂದೇ ಬಿಲ್ಡಿಂಗ್ ನಲ್ಲಿ ವಾಸಿಸುತ್ತಿದ್ದ 41 ಮಂದಿಗೆ ಕೊರೋನಾ ಪಾಸಿಟಿವ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ಮಂದಿಗೆ ಶನಿವಾರ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

ದೆಹಲಿಯ ಕಪಶೇರಾ ಜಿಲ್ಲಾಧಿಕಾರಿ ಕಚೇರಿ ಸಮೀಪ ಇರುವ ತೆಕೆವಾಲಿ ಗಲ್ಲಿಯಲ್ಲಿರುವ ಕಟ್ಟಡವೊಂದರಲ್ಲಿ ಏಪ್ರಿಲ್ 19ರಂದು ಓರ್ವ ವ್ಯಕ್ತಿಗೆ ಪಾಸಿಟಿವ್ ಬಂದಿತ್ತು. ಬಳಿಕ ಆ ಕಟ್ಟಡವನ್ನು ಸೀಲ್ ಮಾಡಲಾಗಿತ್ತು. ಇದೀಗ ಆ ಬಿಲ್ಲಿಂಗ್ ನಲ್ಲಿದ್ದ 41 ಮಂದಿಗೆ ಸೋಂಕು ತಗುಲಿದೆ ಎಂದು ದೆಹಲಿ ನೈರುತ್ಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ಬೆಳಗ್ಗೆಯಷ್ಟೇ ರಾಷ್ಟ್ರ ರಾಜಧಾನಿಯ ಎಲ್ಲಾ 11 ಜಿಲ್ಲೆಗಳು ರೆಡ್ ಜೋನ್ ನಲ್ಲಿದ್ದು, ಮೇ 17ರ ವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಹೇಳಿದ್ದರು. 

ದೆಹಲಿಯಲ್ಲಿ ನಿನ್ನೆ ಒಂದೇ ದಿನ 223 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,738ಕ್ಕೆ ಏರಿಕೆಯಾಗಿದೆ. 1,167 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!