ಕಳೆದು ಹೋದ ಆಭರಣ ಮತ್ತೆ ದಕ್ಕಿತು : ಪ್ರಾಮಾಣಿಕತೆ ಮೆರೆದ ಚೆಟ್ಟಿಮಾನಿ ಗ್ರಾಮಸ್ಥ

ಮಡಿಕೇರಿ: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಅಂದಾಜು 4 ಲಕ್ಷ ರೂ. ಮೌಲ್ಯದ ೪ ಚಿನ್ನದ ನೆಕ್ಲೆಸ್‌ಗಳನ್ನು ಅದರ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಚೆಟ್ಟಿಮಾನಿ ಗ್ರಾಮಸ್ಥರು ಪ್ರಾಮಾಣಿಕತೆ ಮೆರೆದ ಪ್ರಸಂಗ ಮಡಿಕೇರಿಯಲ್ಲಿ ನಡೆದಿದೆ. ನಗರದ ತ್ಯಾಗರಾಜ ಕಾಲೋನಿ ನಿವಾಸಿ ಖಲೀಲ್ ಎಂಬುವವರೆ ಕಳೆದುಕೊಂಡ ಚಿನ್ನವನ್ನು ಮರಳಿ ಪಡೆದವರಾಗಿದ್ದು, ಭಾಗಮಂಡಲದ ಚೆಟ್ಟಿಮಾನಿ ಸಮೀಪದ ಪದಕಲ್ಲು ನಿವಾಸಿ ಮಾಂಗೇರಿರ ಎಂ.ಗಣೇಶ್ ಅವರೇ ಪ್ರಾಮಾಣಿಕತೆಗೆ ಸಾಕ್ಷಿಯಾದ ಗ್ರಾಮಸ್ಥ.

ಖಲೀಲ್ ಅವರು ತಮ್ಮ ಬಳಿಯಿದ್ದ ಚಿನ್ನವನ್ನು ಸ್ಥಳೀಯ ಬ್ಯಾಂಕಿನಲ್ಲಿಟ್ಟು ಹಣ ಪಡೆಯುವ ಸಲುವಾಗಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಕಡೆಯಿಂದ ಇಂದಿರಾಗಾಂಧಿ ವೃತ್ತದ ಕಡೆ ಬಂದಿದ್ದಾರೆ. ಈ ಸಂದರ್ಭ ಚಿನ್ನವನ್ನು ಇಟ್ಟಿದ್ದ ಬ್ಯಾಗ್ ಮುಖ್ಯರಸ್ತೆಯಲ್ಲಿ ಬಿದ್ದು ಹೋಗಿದೆ. ಕಾರ್ಯನಿಮಿತ್ತ ಮಡಿಕೇರಿಗೆ ಬಂದಿದ್ದ ಎಂ. ಗಣೇಶ್ ಕೂಡ ಇದೇ ಮಾರ್ಗದಲ್ಲಿ ನಡೆದುಕೊಂಡು ಹೋಗುವಾಗ ಬಿದ್ದಿದ್ದ ಬ್ಯಾಗನ್ನು ಕಂಡು ಪರಿಶೀಲಿಸಿದಾರೆ. ಬ್ಯಾಗ್‌ನಲ್ಲಿ ಬೆಲೆಬಾಳುವ ಆಭರಣ ಪತ್ತೆಯಾಗಿದೆ.

ಇದೇ ಸಮಯಕ್ಕೆ ಬ್ಯಾಂಕಿಗೆ ತೆರಳಿದ್ದ ಖಲೀಲ್ ತನ್ನ ಬಳಿಯಿದ್ದ ಚಿನ್ನಾಭರಣ ಬಿದ್ದು ಹೋಗಿರುವುದನ್ನು ಕಂಡು ದಿಕ್ಕೇ ತೋಚದಂತಾಗಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ತೆರಳಿ ಈ ಕುರಿತು ದೂರು ದಾಖಲಿಸಿದರು.

ತನಗೆ ಬಿದ್ದು ಸಿಕ್ಕಿರುವ ಚಿನ್ನದ ಆಭರಣಗಳನ್ನು ಹಿಡಿದು ಎಂ. ಗಣೇಶ್, ನಗರ ಠಾಣೆಗೆ ತಲುಪಿಸಿದರು. ತಕ್ಷಣ ಪೊಲೀಸರು ಚಿನ್ನದ ಮಾಲೀಕರನ್ನು ಠಾಣೆಗೆ ಕರೆಯಿಸಿ, ಗಣೇಶ್ ಅವರ ಕೈಯಿಂದಲೇ ಚಿನ್ನದ ಆಭರಣಗಳನ್ನು ಹಸ್ತಾಂತರಿಸುವ ಮೂಲಕ ಚಿನ್ನಾಭರಣ ಕಳೆದುಕೊಂಡವರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದರು. ಗಣೇಶ್ ಅವರ ಮಾನವೀಯತೆ ಮತ್ತು ಪ್ರಾಮಾಣಿಕತೆಗೆ ಪೊಲೀಸರು ಹಾಗೂ ಖಲೀಲ್ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!