ಅದ್ದೂರಿಯಾಗಿ ಸಮಾರೋಪಗೊಂಡ ಕೆಎಸ್ ಸಿಸಿ ಫಿಟ್ನೆಸ್ ಚಾಲೆಂಜ್ ಅಭಿಯಾನ

ದುಬೈ- ದುಬೈ ಫಿಟ್ನೆಸ್ ಚಾಲೆಂಜ್ 30 ದಿನಗಳ ಅಭಿಯಾನದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸ್ಪೋರ್ಟ್ಸ್ & ಕಲ್ಚರ್ ಕ್ಲಬ್ ನವೆಂಬರ್ 29ರಂದು ಅಲ್ ಮಂಮ್ಝಾರ್ ಪಾರ್ಕಿನಲ್ಲಿ ಆಯೋಜಿಸಿದ್ದ ‘ಫಿಟ್ನೆಸ್ ಆಕ್ಟಿವಿಟೀಸ್ ಪ್ರೋಗ್ರಾಮ್’ ಭರ್ಜರಿ ಜನಬೆಂಬಲದೊಂದಿಗೆ ಅದ್ದೂರಿಯಿಂದ ನಡೆಯಿತು.

ಕೆಎಸ್’ಸಿಸಿ ಸದಸ್ಯರುಗಳು ಯುಎಈ ಧ್ವಜವೇ ಮೇಲ್ನೋಟಕ್ಕೆ ಕಾಣುವ ರೀತಿಯಲ್ಲಿ ಬಣ್ಣ ಬಣ್ಣದ ಟಿಶರ್ಟ್ ನೊಂದಿಗೆ ಶಿಸ್ತುಬದ್ಧವಾಗಿ ನಿಂತು ಮನಮೋಹಕವಾದ ‘ಯುಎಈ ಮಾನವ ಧ್ವಜವನ್ನು’ ನಿರ್ಮಿಸಿ ‘ಫಿಟ್ನೆಸ್ ಆಕ್ಟಿವಿಟೀಸ್’ ಕಾರ್ಯಕ್ರಮಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿದರು, ಯುಎಈ ಧ್ವಜದ ಬಣ್ಣದ ಬಲೂನ್ ಹಾರಿಬಿಡುವ ಮೂಲಕ ಎಂಸ್ಕ್ವೇರ್ ಸಂಸ್ಥೆಯ ಮಾಲಿಕ ಮಹಮ್ಮದ್ ಮುಸ್ತಫಾ ಅಧಿಕೃತ ಚಾಲನೆ ನೀಡಿದರು, ಅನಂತರ ಚುಟುಕು ಮ್ಯಾರಥಾನ್ ಪಾರ್ಕಿನಲ್ಲಿ ನೆರೆದಿದ್ದ ಜನರ ಮನಸೆಳೆಯಿತು.

ಮಂಮ್ಝಾರ್ ಪಾರ್ಕಿನಲ್ಲಿ ಕೆಎಸ್’ಸಿಸಿಯ ವೇದಿಕೆಯಲ್ಲಿ ಕರಾಟೆ ಪಟುಗಳಾದ ಅಯಾನ್, ಅದಾನ್, ಅಫಾನ್ ಅವರಿಂದ ಮಾರ್ಷಲ್ ಆರ್ಟ್ಸ್ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ದುಬೈ ಪೊಲೀಸ್ ಅಕಾಡೆಮಿಯ ದೈಹಿಕ ಶಿಕ್ಷಕರಾದ ಕ್ಯಾಪ್ಟನ್ ರಾದೂ ದೊವಾಗನಿಕ್ ನೇತೃತ್ವದಲ್ಲಿ ನಡೆದ ಒಂದು ಗಂಟೆಗಳ ದೈಹಿಕ ಕಸರತ್ತಿನಲ್ಲಿ ಕೆಸ್’ಸಿಸಿ ಸದಸ್ಯರುಗಳು ಸಕ್ರಿಯವಾಗಿ ಭಾಗಿಯಾದರು. ಈ ಸಂದರ್ಭದಲ್ಲಿ ದೈನಂದಿನ ಜೀವನದಲ್ಲಿ ದೈಹಿಕ ಕಸರತ್ತು ಎಷ್ಟು ಮುಖ್ಯ ಎಂಬ ಬಗ್ಗೆ ಹಾಗೂ ಯಾವೆಲ್ಲಾ ಸುಲಭವಾದ ವ್ಯಾಯಾಮಗಳನ್ನು ದಿನನಿತ್ಯ ಮಾಡಬೇಕೆಂದು ನೆರೆದಿದ್ದ ಎಲ್ಲರಿಗೂ ವಿವರಿಸಿದರು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಮ್ಮದ್ ಮುಸ್ತಫಾರವರು ಖುದ್ದಾಗಿ ವೇದಿಕೆಯಲ್ಲಿ ಕ್ಯಾಪ್ಟನ್ ರಾದೂ ಜೊತೆಗೂಡಿ ದೈಹಿಕ ಕಸರತ್ತಿನಲ್ಲಿ ತೊಡಗಿಸಿ ಪಾಲ್ಗೊಂಡಿದ್ದ ಎಲ್ಲಾ ಸದಸ್ಯರುಗಳಿಗೆ ಪ್ರೋತ್ಸಾಹ ತುಂಬಿದರು. ಇಂತಹ ಕಾರ್ಯಕ್ರಮಗಳು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿವರ್ಷವೂ ಕೆಎಸ್’ಸಿಸಿಯಿಂದ ನಡೆಯಲಿ ಎಂದು ಶುಭ ಹಾರೈಸಿದರು. ಅತಿಥಿಗಳಾದ ಹಫೀಝ್, ಕೆಎಸ್’ಸಿಸಿ ಉಪಾಧ್ಯಕ್ಷ ಝಿಯಾವುದ್ದೀನ್, ಕೆಎಸ್’ಸಿಸಿ ಮ್ಯಾನೇಜರ್ ಶಫಿ, ಕಾರ್ಯಕ್ರಮ ಆಯೋಜಕರ ತಂಡದ ನಾಸಿರ್ ಉಪಸ್ಥಿತರಿದ್ದರು. ತನ್ವೀರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕರ್ನಾಟಕ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಯುಎಈ ಯಲ್ಲಿರುವ ಅನಿವಾಸಿ ಭಾರತೀಯರ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರದರ್ಶಿಸಲು ದುಬೈ ಸರ್ಕಾರದ ಕಲ್ಚರಲ್ ಡೆವಲಪ್ಮೆಂಟ್ ಅಥಾರಿಟಿಯ ಅಧೀನದಲ್ಲಿ ಅಧಿಕೃತವಾಗಿ ನೊಂದಣಿ ಪಡೆದ ಕರ್ನಾಟಕದ ಏಕೈಕ ಸಂಸ್ಥೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಹಲವು ರೀತಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತಾ ದುಬೈ ಸರ್ಕಾರದಿಂದ ಪ್ರಶಂಸಿಸಲ್ಪಟ್ಟಿದೆ. ಇವರು ಆಯೋಜಿಸಿದ ಫಿಟ್ನೆಸ್ ಆಕ್ಟಿವಿಟೀಸ್ ಕಾರ್ಯಕ್ರಮವೂ ಕಲ್ಚರಲ್ ಡೆವಲಪ್ಮೆಂಟ್ ಅಥಾರಿಟಿ, ದುಬೈ ಸ್ಪೋರ್ಟ್ಸ್ ಕೌನ್ಸಿಲ್, ದುಬೈ ಮುನ್ಸಿಪಾಲಿಟಿ ಸಹಭಾಗಿತ್ವದಲ್ಲೇ ನಡೆದಿದೆ.

Leave a Reply

Your email address will not be published. Required fields are marked *

error: Content is protected !!