ಮತ್ತೆ ವಿಶ್ವಾಸ ಮತಕ್ಕೆ ಸಿಎಂಗೆ ಡೆಡ್ ಲೈನ್ ನೀಡಿದ ರಾಜ್ಯಪಾಲರು !
ಬೆಂಗಳೂರು: ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ವಿಶ್ವಾಸಮತ ಸಾಬೀತು ಪಡಿಸಲು ಮತ್ತೊಮ್ಮೆ ಸಮಯಾವಕಾಶವನ್ನು ನಿಗದಿ ಮಾಡಿದ್ದು, ಇಂದು ವಿಧಾನಸಭೆಯ ಕಲಾಪ ಪೂರ್ಣಗೊಳ್ಳುವ ಮುನ್ನ ವಿಶ್ವಾಸ ಮತ ಸಾಬೀತು ಪಡಿಸುವಂತೆ ಆದೇಶ ನೀಡಿದ್ದಾರೆ.
ರಾಜ್ಯಪಾಲರು ಸಿಎಂ ಅವರಿಗೆ ನೀಡುತ್ತಿರುವ 2ನೇ ಆದೇಶ ಇದಾಗಿದ್ದು, ಇಂದು ಮಧ್ಯಾಹ್ನ 1.30ರ ಒಳಗಡೆ ವಿಶ್ವಾಸ ಮತ ಸಾಬೀತು ಪಡಿಸಲು ನಿನ್ನೆ ಆದೇಶ ನೀಡಿದ್ದರು. ಆದರೆ ಈ ಆದೇಶವನ್ನು ಸರ್ಕಾರ ಪಾಲನೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಸಿಎಂ ಪತ್ರವನ್ನು ಬರೆದು ವಿವರಣೆ ನೀಡಿದ್ದರು.
ಸಿಎಂ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ಮತ್ತೊಂದು ಡೆಡ್‍ಲೈನ್ ನೀಡಿರುವ ರಾಜ್ಯಪಾಲರು 2ನೇ ಬಾರಿಗೆ ಸಮಯಾವಕಾಶವನ್ನು ನೀಡಿದ್ದಾರೆ. ಈ ಬಾರಿಯೂ ನಿಯಮಗಳ ಕಾರಣ ಹೇಳಿ ಸಿಎಂ ಅವರು ಇದನ್ನು ನಿರಾಕರಿಸುತ್ತರಾ ಅಥವಾ ಪಾಲನೆ ಮಾಡುತ್ತರಾ ಎಂಬ ಕುತೂಹಲ ಮೂಡಿದೆ.
ಈಗಾಗಲೇ ಸದನದ ಮಧ್ಯಂತರ ವರದಿಯನ್ನು ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಈ ಬಾರಿಯೂ ಆದೇಶ ಉಲ್ಲಂಘನೆ ಆದರೆ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಹೆಚ್ಚಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ವಿಪ್ ಜಾರಿ ಕುರಿತು ಸ್ಪಷ್ಟನೆ ಕೇಳಿದ್ದಾರೆ.
ಬುಧವಾರ ನೀಡಿದ ಆದೇಶದಲ್ಲಿ ಸದನಕ್ಕೆ ಬರಬೇಕೋ? ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ. ಅವರನ್ನು ಬಲವಂತವಾಗಿ ಸದನಕ್ಕೆ ಬರುವಂತೆ ಒತ್ತಡ ಹಾಕುವಂತಿಲ್ಲ ಎಂದು ಸುಪ್ರೀಂ ಹೇಳಿತ್ತು.
ದೋಸ್ತಿ ನಾಯಕರು ವಿಪ್ ಜಾರಿಗೊಳಿಸುವ ಮೂಲಕ ಶಾಸಕರನ್ನು ಸದನಕ್ಕೆ ಬರುವಂತೆ ಮಾಡಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಸುಪ್ರೀಂ ತನ್ನ ಮಧ್ಯಂತರ ಆದೇಶದಲ್ಲಿ ವಿಪ್ ಬಗ್ಗೆ ಯಾವುದೇ ಸ್ಪಷ್ಟವಾದ ಅಂಶವನ್ನು ತಿಳಿಸದ ಕಾರಣ ಈಗ ಕಾಂಗ್ರೆಸ್ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಸಲ್ಲಿಸಿದೆ.
ವಿಪ್ ಜಾರಿ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಅತೃಪ್ತರು ಸದನಕ್ಕೆ ಹಾಜರಾಗಬೇಕಿಲ್ಲ ಎಂಬ ಆದೇಶದಿಂದ ನಮ್ಮ ಸಾಂವಿಧಾನಿಕ ಹಕ್ಕಿಗೆ ಧಕ್ಕೆಯಾಗಿದೆ. ಈ ಆದೇಶ 10ನೇ ಷೆಡ್ಯೂಲ್ ಅಡಿಯಲ್ಲಿ ಪಕ್ಷಕ್ಕೆ ನೀಡಲಾದ ಅಧಿಕಾರವನ್ನು ಕಿತ್ತುಕೊಂಡಿದೆ. ಹೀಗಾಗಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೋರಿ ಅರ್ಜಿಯಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮನವಿ ಮಾಡಿಕೊಂಡಿದ್ದಾರೆ.