ರಾಜ್ಯಪಾಲರ ಆದೇಶ ಪಾಲಿಸದ ಮೈತ್ರಿ ಸರ್ಕಾರ !

ಬೆಂಗಳೂರು: ಇಂದೇ ವಿಶ್ವಾಸಮತಯಾಚನೆ ಮಾಡಬೇಕೆಂದು ಆದೇಶ ಕೊಟ್ಟಿರುವ ರಾಜ್ಯಪಾಲರ ಆದೇಶಕ್ಕೆ ದೋಸ್ತಿಗಳು ಡೋಂಟ್‍ ಕೇರ್ ಎಂದಿದ್ದಾರೆ.

ಬೆಳಗ್ಗೆ ಸಿಎಂ ಮಾತು ಆರಂಭಿಸುವಾಗ ಇಂದು ವಿಶ್ವಾಸಮತ ನಡೆಯಬಹುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ ಕೃಷ್ಣಬೈರೇಗೌಡರು ಎಂದು ನಿಂತು ರಾಜ್ಯಪಾಲರಿಗೆ ವಿಶ್ವಾಸ ಮತಯಾಚನೆ ಮಾಡುವಂತೆ ಹೇಳುವ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿ ಸರ್ಕಾರದ ಪರ ಮಾತನಾಡಿದರು.

ಮಧ್ಯಾಹ್ನ 1:30 ಆದರೂ ವೋಟ್ ಮಾತ್ರ ನಡೆಯಲೇ ಇಲ್ಲ. ಈ ವೇಳೆ ಯಡಿಯೂರಪ್ಪನವರು ಎದ್ದು ನಿಂತು ಸ್ಪೀಕರ್ ಅವರಲ್ಲಿ ಈ ಪ್ರಕ್ರಿಯೆ ಕೂಡಲೇ ಮುಗಿಸಿಕೊಡಿ ಎಂದು ಮನವಿ ಮಾಡಿದರು.

ಯಡಿಯೂರಪ್ಪ ಮನವಿಗೆ ಸ್ಪೀಕರ್, ನನಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದಿರುವುದು ಸಿಎಂ ಅವರಿಗೆ. ಕಲಾಪ ಹೇಗೆ ನಡೆಯಬೇಕೋ ಹಾಗೆ ನಡೆಸುತ್ತೇನೆ. ಚರ್ಚೆಯಾದ ಬಳಿಕ ಮತಕ್ಕೆ ಹಾಕಲಾಗುವುದು ಎಂದು ತಿಳಿಸಿದರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ನಡೆದ ಪರಿಣಾಮ ಕಲಾಪವನ್ನು ಸ್ಪೀಕರ್ ಮುಂದಕ್ಕೆ ಹಾಕಿದರು.

ರಾಜ್ಯಪಾಲರು ಸಿಎಂಗೆ ಶುಕ್ರವಾರ ಮಧ್ಯಾಹ್ನ 1:30ರ ಒಳಗಡೆ ವಿಶ್ವಾಸಮತಯಾಚನೆ ಮಾಡುವಂತೆ ಆದೇಶಿಸಿದ್ದರು. ಈಗ ಈ ಆದೇಶದ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗದ ಮಧ್ಯೆ ಸಂಘರ್ಷ ಎದುರಾಗುವ ಸಾಧ್ಯತೆಯಿದೆ. ಸದನದಲ್ಲಿ ರಾಜ್ಯಪಾಲರ ಕಚೇರಿಯ ವಿಶೇಷ ಅಧಿಕಾರಿ ಉಪಸ್ಥಿತರಿದ್ದರು. ಈಗ ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:40 ರವರೆಗೆ ಕಲಾಪದ ನಡೆದ ವಿವರವನ್ನು ರಾಜ್ಯಪಾಲರಿಗೆ ತಿಳಿಸಲು ರಾಜಭವನಕ್ಕೆ ತೆರಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!