ಯುವ ಶಕ್ತಿ ಮತ್ತು ಮಹಿಳಾ ಶಕ್ತಿಯ ಸಮ್ಮಿಲನ ಪಕ್ಷ ಬಲವರ್ಧನೆಗೆ ಪೂರಕ ಸೊರಕೆ
ಕಾಪು : ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಕಾಪು ನಗರ ಕಾಂಗ್ರೆಸ್ ಸಮಿತಿಯ ಉಭಯ ಮಹಿಳಾ ಘಟಕದ ಆತಿಥ್ಯದಲ್ಲಿ ನಡೆದ “ಆಟಿದ ಅಟ್ಟಿಲ್” ಕಾರ್ಯಕ್ರಮವು ಕಾಪು ರಾಜೀವ್ ಭವನದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಉದ್ಘಾಟಿಸಿ ಮಾತನಾಡಿದ ಇವರು ಇಂದಿನ ನವ ಪೀಳಿಗೆಗೆ ಹಿಂದಿನ ಸಂಪ್ರದಾಯ, ಸಂಸ್ಕಾರ,ಸಂಸ್ಕೃತಿಯ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದೆ ಇರುವುದರಿಂದ ನಮ್ಮ ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಮತ್ತು ಎಲ್ಲ ಜಾತಿ-ಧರ್ಮದ ಹಿರಿಯರು ಕಿರಿಯರು ಒಂದೆಡೆ ಸಮ್ಮಿಲನಗೊಂಡು ಸೌಹಾರ್ದತೆ ಬೆಳೆಯುತ್ತದೆ, ಸೌಹಾರ್ದತೆ ಜೊತೆಗೆ ಪಕ್ಷ ಸಂಘಟನೆಗೆ ಕೂಡ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗಾಗಿ “ಇಂದಿರಾ ಸ್ವ-ಸಹಾಯ” ಗುಂಪುಗಳನ್ನು ಪ್ರತೀ ಬೂತ್ ಮಟ್ಟದಲ್ಲಿ ರಚಿಸಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ ಎಂದರು. ಅದೇ ರೀತಿಯಲ್ಲಿ ಯುವಕರಿಗಾಗಿ ಬೇರೆ ಬೇರೆ ಕ್ರೀಡಾ ಪಂದ್ಯಾಕೂಟಗಳನ್ನು ಆಯೋಜಿಸುವ ನಿಟ್ಟಿನಲ್ಲಿ ತಯಾರಿ ನಡೆಸುವಂತೆ ಸೂಚಿಸಿದರು. ಮಹಿಳೆಯರು ಮತ್ತು ಯುವಕರ ಶಕ್ತಿಯೇ ಪಕ್ಷ ಬಲವರ್ಧನೆಗೆ ಪ್ರೇರಣೆ ಎಂದರು.
ಮುಖ್ಯ ಅತಿಥಿಯಾದ ತುಳು ಜಾನಪದ ಚಿಂತಕ ಪಿ. ಕೆ. ಸದಾನಂದರವರು ಆಟಿ(ಆಷಾಢ) ತಿಂಗಳ ಮಹತ್ವ ಮತ್ತು ಹಿಂದಿನ ಕಾಲದ ಸಾಂಪ್ರದಾಯಿಕ ಆಚರಣೆಗಳು ಇಂದು ಮರೆಯಾಗುತ್ತಿದ್ದು, ಯುವ ಪೀಳಿಗೆ ಆಧುನಿಕ ಜೀವನ ಶೈಲಿಗೆ ಹೆಚ್ಚು ಒತ್ತು ನೀಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಹಿಂದಿನ ಸಂಪ್ರದಾಯ ಮತ್ತು ಆಚರಣೆಗಳು ಉಳಿಯಬೇಕಾದರೆ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದು ನುಡಿದರು.
ಜಾತಿ-ಮತ-ಧರ್ಮದ ಎಲ್ಲೆಯನ್ನು ಮೀರಿ ಪಕ್ಷ ಸಂಘಟಿತವಾಗಿ ಬೆಳೆಯುತ್ತದೆಯೇ ವಿನಃ ಜಾತೀಯತೆಯ ಅಡಿಪಾಯದಲ್ಲಿರುವ ಯಾವುದೇ ರಾಜಕೀಯ ಪಕ್ಷವೂ ಹೆಚ್ಚು ದಿನ ಉಳಿಯಲಾರದು ಎಂದರು.
ಕರ್ನಾಟಕ ರಾಜ್ಯ ಪಂಚಾಯತ್ ಅಧ್ಯಕ್ಷರುಗಳ ಒಕ್ಕೂಟದ ಉಪಾಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಮಾತನಾಡಿ, ಮಹಿಳೆಯರು ಮತ್ತು ಯುವಕರನ್ನು ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಇಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಕ್ಷ ಸಂಘಟನೆ ಮಾಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನಚಂದ್ರ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಆಟಿ ತಿಂಗಳ ಮಹತ್ವದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಕಾಪು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಾದಿಕ್,ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೋಡ್ರಿಗಸ್,ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಚ್. ಅಬ್ದುಲ್ಲಾ, ಯುವ ಘಟಕದ ಅಧ್ಯಕ್ಷ ಮೆಲ್ವಿನ್ ಡಿಸೋಜ, ವಿನಯ್ ಬಲ್ಲಾಳ್, ಮನಹರ್ ಇಬ್ರಾಹಿಂ, ದೀಪಕ್ ಎರ್ಮಾಳ್, ಉಡುಪಿ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಉಪಸ್ಥಿತರಿದ್ದರು.
ಬ್ಲಾಕ್ ಪದಾಧಿಕಾರಿಗಳಾದ ಅಮೀರ್ ಮೊಹಮ್ಮದ್, ಹರೀಶ್ ನಾಯಕ್, ನಾಗೇಶ್ ಸುವರ್ಣ, ಪ್ರಶಾಂತ್ ಜತನ್ನ, ಹಸನ್ ಬಾವಾ, ಪುರಸಭಾ ಸದಸ್ಯರಾದ ಕೆ. ಎಚ್.ಉಸ್ಮಾನ್, ಅಬ್ದುಲ್ ಹಮೀದ್, ಸುಲೋಚನಾ ಬಂಗೇರ, ಅಶ್ವಿನಿ, ಸುರೇಶ್ ದೇವಾಡಿಗ, ಮುಖಂಡರಾದ ವಿಕ್ರಂ ಕಾಪು, ಮಾಧವ್ ಪಾಲನ್, ಮಧ್ವರಾಜ್ ಬಂಗೇರ, ರೇಣುಕಾ ಪುತ್ರನ್ ಹೆಜಮಾಡಿ,ಸಂಧ್ಯಾ ಬಾಲಕೃಷ್ಣ, ದೇವರಾಜ್ ಕೋಟ್ಯಾನ್, ಸತೀಶ್ ದೇಜಾಡಿ, ಆಸಿಫ್ ಎರ್ಮಾಳ್ ಮತ್ತು ಪಂಚಾಯತ್ ಸದಸ್ಯರು, ಕಾರುಕರ್ತರು ಉಪಸ್ಥಿತರಿದ್ದರು.
ತದನಂತರ ಮಹಿಳೆಯರು ತಯಾರಿಸಿ ತಂದ ಬಗೆ-ಬಗೆಯ ಖಾದ್ಯಗಳೊಂದಿಗೆ ಗಣ್ಯರು ಹಾಗೂ ಕಾರ್ಯಕರ್ತರೊಂದಿಗೆ ಸಮೂಹ ಭೋಜನ ನಡೆಯಿತು.
ನಗರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಪಿ. ಸಾಲ್ಯಾನ್ ಸ್ವಾಗತಿಸಿದರು, ಪುರಸಭಾ ಸದಸ್ಯೆ ಶಾಂತಲತಾ ಎಸ್. ಶೆಟ್ಟಿ ಧನ್ಯವಾದವಿತ್ತರು, ಪುರಸಭಾ ಸದಸ್ಯೆ ಕು. ಸೌಮ್ಯ ಎಸ್., ಕಾರ್ಯಕ್ರಮ ನಿರೂಪಿಸಿದರು.