ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಮೊದಲ ಬಲಿ
ಉಡುಪಿ : ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಗಾಳಿಯಿಂದ ಅಪಾರ ನಷ್ಟವುಂಟಾಗಿದ್ದು, ಇಂದು ಬೆಳಗ್ಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ಚೇರ್ಕಾಡಿ ಗ್ರಾಮದಲ್ಲಿ ನಡೆದಿದೆ.
ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ವೇಳೆ ಮನೆಯ ಗೋಡೆ ಕುಸಿದು ಮೈಮೇಲೆ ಬಿದ್ದು ಚೇರ್ಕಾಡಿ ಗ್ರಾಮದ ಬೆನಗಲ್ ನಿವಾಸಿ ಕೊರಗ ಮರಕಾಲ ಎಂಬವರ ಪತ್ನಿ ಗಂಗಾ ಮರಕಾಲ್ತಿ (46) ಮೃತಪಟ್ಟವರು. ಇಂದು ಬೆಳಿಗ್ಗೆ 6 ಗಂಟೆಗೆ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಶಿಥಿಲಗೊಂಡಿದ್ದ ಮಣ್ಣಿನ ಗೋಡೆ ಕುಸಿದಿದ್ದು, ಈ ವೇಳೆ ದನದ ಹಾಲು ಕರೆಯುತ್ತಿದ್ದ ಗಂಗಾ ಅವರು ಗೋಡೆಯ ಅವಶೇಷಗಳ ಅಡಿ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು.
ನಿರಂತರ ಮಳೆಯಿಂದ ತೊಯಿದು ಹೋಗಿದ್ದ ಗೋಡೆ ಬಚ್ಚಲು ಮನೆಯ ಗೋಡೆ ಕುಸಿದು ಗಂಗಾ ಮರಕಾಲ್ತಿ ಸಾವು.
ಪೇತ್ರಿ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಘಟನಾ ಸ್ಥಳಕ್ಕೆ ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ ಗ್ರಾಮ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ