ಜಾನುವಾರುಗಳನ್ನು ಕಾನೂನುಬದ್ದವಾಗಿ,  ಸುರಕ್ಷಿತವಾಗಿ ಸಾಗಾಣಿಕೆ ಜಿಲ್ಲಾಡಳಿತದಿಂದ ಹೊಸ ಆಪ್

ಉಡುಪಿ: ಜಾನುವಾರುಗಳನ್ನು ಕಾನೂನುಬದ್ದವಾಗಿ,  ಸುರಕ್ಷಿತವಾಗಿ ಸಾಗಾಣಿಕೆ ಮಾಡುವ ಬಗ್ಗೆ, ದ.ಕ ಜಿಲ್ಲೆಯಲ್ಲಿ ಎಲ್‍ಎಲ್‍ಸಿ (ಲೈವ್ ಸ್ಟಾಕ್ ಲಾಜಿಸ್ಟಿಕ್ ಕಂಟ್ರೋಲ್) ಆಪ್ ಸಿದ್ದಪಡಿಸಿದ್ದು, ಅದೇ ಮಾದರಿಯನ್ನು ಉಡುಪಿ ಜಿಲ್ಲೆಯಲ್ಲಿಯೂ ಅಳವಡಿಸುವ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಾಣಿ ದಯಾ ಸಂಘದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್‍ಎಲ್‍ಸಿ ಆಪ್‍ನಲ್ಲಿ ನೊಂದಣಿ ಮಾಡಿಕೊಂಡು, ಜಾನುವಾರುಗಳನ್ನು ಸಾಗಿಸುವುದರಿಂದ, ವಾಹನಗಳ ನೊಂದಣಿ ಸಂಖ್ಯೆ, ಸಾಗಾಟಗಾರನ ವಿವರ ಲಭ್ಯವಾಗಲಿದ್ದು, ಕಾನೂನುಬದ್ದವಾಗಿ ಜಾನುವಾರು ಸಾಗಾಟ ಮಾಡುವವರು ಮತ್ತು ಅಕ್ರಮ ಸಾಗಾಟಗಾರರನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ಡಿಸಿ ಹೇಳಿದರು.

ಜಿಲ್ಲೆಯಲ್ಲಿ ಜಾನುವಾರುಗಳ ಅಕ್ರಮ ಸಾಗಾಟ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿಯಲ್ಲಿನ ಜಾನುವಾರುಗಳ ಸಾಗಾಟ ನಡೆಯುತ್ತಿದೆ ಎಂದು ಎಸ್ಪಿ ನಿಷಾ ಜೇಮ್ಸ್ ತಿಳಿಸಿದರು, ಜಾನುವಾರುಗಳನ್ನು ಬೀದಿಗೆ ಬಿಡುವ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳುವ ಚಿಂತನೆ ಇದೆ ಮತ್ತು ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಸಂರಕ್ಷಣೆ ಕುರಿತಂತೆ ಪಂಚಾಯತ್‍ಗಳ ಹಂತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತಂತೆ ಜಿಪಂ ಸಿಇಓ ಮೂಲಕ ಎಲ್ಲಾ ಪಂಚಾಯತ್‍ಗಳಿಗೆ ಸುತ್ತೋಲೆ ಕಳುಹಿಸಲಾಗುವುದು ಎಂದು ಡಿಸಿ ಹೇಳಿದರು.

ಜಾನುವಾರುಗಳನ್ನು ರಕ್ಷಿಸುತ್ತಿರುವ ಖಾಸಗೀ ಸಂಸ್ಥೆಗಳು ಜಾನುವಾರುಗಳ ನಿರ್ವಹಣೆಗೆ ಸರಕಾರದ ಸಹಾಯಧನದ ಅಗತ್ಯತೆಯ ಬೇಡಿಕೆಗೆ ಪ್ರತಿಕ್ರಿಯಿಸಿ, ಜಾನುವಾರುಗಳ ರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವ ಗೋ ಶಾಲೆ ಹಾಗೂ ಇತರ ಸಂಸ್ಥೆಗಳು ಕಡ್ಡಾಯವಾಗಿ ನೊಂದಾಯಿಸಿಕೊಳ್ಳುವಂತೆ ಸೂಚನೆ ನೀಡಿದರು. ನೋಂದಾಯಿತ ಗೋಶಾಲೆಗಳ ಸಂಖ್ಯೆ ಕಡಿಮೆ ಇರುವುದರಿಂದ ಗೋವುಗಳ ನಿರ್ವಹಣೆಗೆ ಜಾಗದ ಕೊರತೆ ಇರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಈ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಹಾಗೂ ಅಪಘಾತದಲ್ಲಿ ಗಾಯಗೊಂಡ ಶ್ವಾನ ಅಥವಾ ಇತರೆ ಜಾನುವಾರುಗಳ ಶುಶ್ರೂಷೆ ಮಾಡಿ ಅವುಗಳ ರಕ್ಷಣೆಗೆ ಪ್ರತಿ ತಾಲೂಕಿಗೆ ಒಂದು ತಾತ್ಕಾಲಿಕ ನೈಟ್ ಶೆಲ್ಟರ್‍ನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಾಣಿಗಳ ಶವಗಳನ್ನು ವಿಲೇವಾರಿ ಮಾಡಲು ಜಾಗದ ಕೊರತೆ ಇದ್ದು,  ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಯವರಲ್ಲಿ ಶ್ರೀ. ದ್ವಾರಕಾಮಯಿ, ಸಾಯಿ ಸಾಂತ್ವನ ಮಂದಿರ ಟ್ರಸ್ಟ್(ರಿ) ಸಂಸ್ಥೆಯವರು ಮನವಿ ಮಾಡಿದರು.

ಕುದಿ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶ, ಗಂಗೊಳ್ಳಿ ಬಂದರಿನಲ್ಲಿ ಬೀದಿ ನಾಯಿಗಳ ಕಾಟ, ಬೀದಿ ನಾಯಿಗಳಿಗೆ ನೈಟ್ ಶೆಲ್ಟರ್ ಆರಂಭ, ಹೊಸ ಗೋಶಾಲೆ ಆರಂಭದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ 145 ಪಶು ವೈದ್ಯರ ಅಗತ್ಯತೆ ಇದ್ದು, ಪ್ರಸ್ತುತ 36 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.  ಜಿಲ್ಲೆಯಲ್ಲಿ ಪಶು ಪಾಲನಾ ಇಲಾಖೆ, ಸ್ಥಳೀಯ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ 3325 ಶ್ವಾನಗಳಿಗೆ ರೇಬೀಸ್ ಲಸಿಕೆ ನೀಡಲಾಗಿದ್ದು, 124 ಶ್ವಾನಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಈವರೆಗೆ 3 ಗೋ ಹತ್ಯೆ ಪ್ರಕರಣ ಹಾಗೂ 11 ಅಕ್ರಮ ಜಾನುವಾರು ಸಾಗಾಣಿಕೆ ಪ್ರಕರಣ ದಾಖಲಾಗಿರುವುದಾಗಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಸರ್ವೋತ್ತಮ ಉಡುಪ  ಮಾಹಿತಿ ನೀಡಿದರು.

ಸಭೆಯ ಪ್ರಾರಂಭದಲ್ಲಿ ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!