ಬೋಟ್ ನಾಪತ್ತೆ ಅಣ್ಣನ ಚಿಂತೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ಸಹೋದರ
ಉಡುಪಿ:ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಸಿಲುಕಿ ಕಣ್ಮರೆಯಾಗಿದ್ದ ರಮೇಶ್ ಶನಿಯಾರ ಮೊಗೇರ ಅವರ ಚಿಂತೆಯಲ್ಲಿ ಸಹೋದರರೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಭಟ್ಕಳ ಬಂದರು ರಸ್ತೆಯ ಶನಿಯಾರ ಮೊಗೇರ ಅವರ ಪುತ್ರ ಚಂದ್ರಶೇಖರ್ ಶನಿಯಾರ ಮೊಗೇರ (30) ಆದರ್ಶ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜೀವನ್ಮೋರಣ ಹೋರಾಟ ನಡೆಸುತ್ತಿರುವವರು.ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿ 140 ದಿನಗಳ ಬಳಿಕ ಬೋಟ್‍ನ ಅವಶೇಷದ ವಾರ್ತೆಯಿಂದ ನೊಂದಿದ್ದ ಕುಟುಂಬಕ್ಕೆ ಮತ್ತೊಂದು ಪುತ್ರನ ವಿಷ ಸೇವನೆಯ ಬರ ಸಿಡಿಲು ಬಡಿದು ಮತ್ತಷ್ಟು ಅಘಾತ ತಂದಿದೆ.
ವಯೋವೃದ್ಧ ತಂದೆ ತಾಯಿ, ಸಹೋದರ, ಸಹೋದರರಿಯರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.ಘಟನೆ ವಿವರ:ಭಟ್ಕಳದ ಶನಿಯಾರ ಮೊಗೇರ ಅವರ 7 ಮಂದಿ ಮಕ್ಕಳ ಪೈಕಿ ರಮೇಶ್ ಶನಿಯಾರ ಮೊಗೇರ (32) ಮಲ್ಪೆ ಬಡನಿಡಿಯೂರು ನಿವಾಸಿ ಚಂದ್ರಶೇಖರ್ ಕೋಟ್ಯಾನ್ ಅವರ ಮಾಲೀಕತ್ವದ ಸುವರ್ಣ ತ್ರಿಭುಜ ಬೋಟ್‍ನಲ್ಲಿ ಡಿ. 13 ರಂದು ಮೀನುಗಾರಿಕೆಗೆ ತೆರಳಿ ಬಳಿಕ ನಾಪತ್ತೆಯಾಗಿದ್ದರು.
ಇದೇ ಅಘಾತದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಾಗಿದ್ದ ರಮೇಶ್ ಅವರ ಸಹೋದರ ಚಂದ್ರಶೇಖರ್ ಅನ್ನ, ನೀರು ತ್ಯಜಿಸಿ ಮನೆಯ ಮೂಲೆ ಸೇರಿದ್ದಾರೆ ಎನ್ನಲಾಗಿದೆ.ಭಟ್ಕಳದಲ್ಲಿ ಮೀನುಗಾರಿಕಾ ವೃತ್ತಿ ಮಾಡುತ್ತಿದ್ದ ಚಂದ್ರಶೇಖರ್ ಗಟ್ಟಿ ದೇಹವನ್ನು ಹೊಂದಿದ್ದು, ಶ್ರಮ ಜೀವಿಯಾಗಿದ್ದರು. ಮನೆಗೆ ಆಧಾರ ಸ್ತಂಭವಾಗಿದ್ದ ರಮೇಶ್‍ನ ಕಣ್ಮರೆಯಿಂದ ಸಾಕಷ್ಟು ನೊಂದಿದ್ದ ಚಂದ್ರಶೇಖರ್, ತಿಂಗಳ ಹಿಂದಷ್ಟೇ ನೋವು ಮರೆತು ಜನರೊಂದಿಗೆ ಬೆರೆಯಲು ಯತ್ನಿಸಿದ್ದರು.
ಮೇ 3 ರಂದು ಸುವರ್ಣ ತ್ರಿಭುಜ ಬೋಟ್‍ನ ಅವಘಡದ ಸುದ್ದಿ ಕೇಳಿ ಮತ್ತೆ ಖಿನ್ನತೆಗೆ ಒಳಾಗಿದ್ದರು. ಆಹಾರ ಸರಿಯಾಗಿ ಸೇವನೆ ಮಾಡದೇ ದೇಹದ ಸ್ಥಿತಿ ಉಲ್ಬಣಗೊಂಡಿತ್ತು. ಇದೇ ನೋವಿನಲ್ಲಿದ್ದ ಚಂದ್ರಶೇಖರ್ ಇಲಿ ಷಶಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆಂದು ತಿಳಿದು ಬಂದಿದೆ.ರಕ್ತ ಪರೀಕ್ಷೆ ಮಾಡುವಂತೆ ಹೇಳಿದ್ದ!: ಚಂದ್ರಶೇಖರ್ ವಿಷ ಸೇವನೆ ಮಾಡಿರುವ ಬಗ್ಗೆ ಯಾರಲ್ಲೂ ಬಾಯಿ ಬಿಟ್ಟಿರಲಿಲ್ಲ.
ವಿಷ ನಿಧನವಾಗಿ ದೇಹವನ್ನು ಆವರಿಸಿದ್ದು, ಸುಸ್ತಾಗಿ ರಕ್ತ ಪರೀಕ್ಷೆ ಮಾಡಿಸುವಂತೆ ನನ್ನ ಬಳಿ (ಇನ್ನೋರ್ವ ಸಹೋದರ ನಾಗರಾಜ್) ಹೇಳಿದ್ದ. ಅದರಂತೆ ಭಟ್ಕಳದಲ್ಲಿ ಪರೀಕ್ಷೆ ಮಾಡಿಸಿದ್ದು, ಜಾಂಡಿಸ್ (ಹಳದಿ ರೋಗ) ಇರುವ ಬಗ್ಗೆ ತಿಳಿಸಿ ಮಾತ್ರೆ ನೀಡಿರುವ ಬಗ್ಗೆ ಸಹೋದರ ನಾಗರಾಜ್ ತಿಳಿಸಿದ್ದಾರೆ.ನೆರೆ ಮನೆಯವರಲ್ಲಿ ಬಾಯಿಬಿಟ್ಟರು: ಕಳೆದ 3,4 ದಿನಗಳ ಹಿಂದೆ ವಿಷ ಸೇವನೆ ಮಾಡಿ, ದೇಹದ ಒಳಗಡೆಯೇ ನೋವು ಉಣ್ಣುತ್ತಿದ್ದ ಚಂದ್ರಶೇಖರ್ ಯಾರಲ್ಲೂ ಹೇಳಿ ಇರಲಿಲ್ಲ. ಮೇ 13 ರಂದು ಆರೋಗ್ಯ ಮತ್ತಷ್ಟು ಹಾದಗೆಟ್ಟಿದ್ದು ನಾನು ಹಾಗೂ ನೆರೆ ಮನೆಯ ಮಾಧವ ಅವರ ಜತೆಗೆ ಭಟ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಈ ವೇಳೆ 3 ದಿನಗಳ ಹಿಂದೆ ವಿಷ ಸೇವನೆ ಮಾಡಿರುವ ಬಗ್ಗೆ ಮಾಧವ ಅವರಲ್ಲಿ ಹೇಳಿಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ ಎಂದು ಮಾಹಿತಿ ನೀಡಿದರು.