ಮನುಕುಲಕ್ಕೆ ಉಗ್ರವಾದ ದೊಡ್ಡ ಅಪಾಯ : ಪ್ರಧಾನಿ ಮೋದಿ

ಒಸಾಕಾ : ಭಯೋತ್ಪಾದನೆಯು ಮಾನವೀಯತೆಗೆ ದೊಡ್ಡ ಅಪಾಯ. ಅದು ಕೇವಲ ಮುಗ್ಧರ ಜೀವ ಕಿತ್ತುಕೊಳ್ಳುತ್ತಿಲ್ಲ, ಆರ್ಥಿಕ ಅಭಿವೃದ್ಧಿ ಮತ್ತು ಕೋಮುಸೌಹಾರ್ದಕ್ಕೆ ದಕ್ಕೆಯನ್ನುಂಟು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದರು.

ಜಪಾನ್‌ನ ಒಸಾಕಾದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಂಡು ಬ್ರಿಕ್ಸ್ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ  ಪ್ರಧಾನಿ ಮೋದಿ, ಭಯೋತ್ಪಾದನೆಗೆ ಬೆಂಬಲ ನೀಡುವ ಎಲ್ಲ ಸಂಗತಿಗಳನ್ನೂ ನಾವು ವಿರೋಧಿಸಬೇಕು. ಮನುಕುಲಕ್ಕೆ ಭಯೋತ್ಪಾದನೆ ಅತ್ಯಂತ ದೊಡ್ಡ ಬೆದರಿಕೆಯಾಗಿದೆ. ಇದು ಕೇವಲ ಅಮಾಯಕರ ಪ್ರಾಣವನ್ನು ಮಾತ್ರವಲ್ಲ, ಪರೋಕ್ಷವಾಗಿ ಆರ್ಥಿಕಾಭಿವೃದ್ಧಿ, ಕೋಮುಸಂಘರ್ಷದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ನಾವು ಎಲ್ಲ ಮಾದರಿಯ ಉಗ್ರವಾದವನ್ನು ಹತ್ತಿಕ್ಕಬೇಕು. ಉಗ್ರವಾದವನ್ನು ಮಾತ್ರವಲ್ಲ, ಅದಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡುವ ಮೂಲಗಳಿಗೂ ಕತ್ತರಿ ಹಾಕಬೇಕು.  ಭಯೋತ್ಪಾದನೆಗೆ ಬೆಂಬಲ ನೀಡುವ ಎಲ್ಲ ಸಂಗತಿಗಳನ್ನೂ ನಾವು ವಿರೋಧಿಸಬೇಕು ಎಂದು ಹೇಳಿದರು.

ಇದೇ ವೇಳೆ ಪ್ರಮುಖ ಸಲಹೆಗಳನ್ನೂ ನೀಡಿದ ಪ್ರಧಾನಿ ಮೋದಿ, ಮೊದಲು ಜಾಗತಿಕ ಸಮುದಾಯ ಮತ್ತು ಆರ್ಥಿಕ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಬೇಕು. ನಿರಂತರ ಆರ್ಥಿಕ ವಿಕಾಸದಿಂದ ಬದಲಾವಣೆ ಖಂಡಿತಾ ಸಾಧ್ಯ. ಇದಕ್ಕಾಗಿ ಇಂಧನ ಮತ್ತು ಗ್ಯಾಸ್ ದರ ಇಳಿಕೆ ಮತ್ತು ಅವುಗಳ ಮೇಲಿನ ಅವಲಂಬನೆಯನ್ನು ನಿಯಂತ್ರಿಸಬೇಕು. ಹೊಸ ಅಭಿವೃದ್ಧಿಯಡಿಯಲ್ಲಿ ಸದಸ್ಯ ರಾಷ್ಟ್ರಗಳ ಭೌತಿಕ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು.

ಜಿ 20 ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಖೈ ಜಿನ್ಪಿಂಗ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಮತ್ತು ದಕ್ಷಿಣ ಆಫ್ರಿಕ ಅಧ್ಯಕ್ಷ ಕಿರಿಲ್ ಮರಾಮಫೋಸಾ ಇದ್ದರು. ಬ್ರಿಕ್ಸ್ ಸಮಿತಿಯಲ್ಲಿ ಮಾತನಾಡಿದ ವಿಶ್ವ ನಾಯಕರು, ಪಾರದರ್ಶಕ, ತಾರತಮ್ಯವಿಲ್ಲದ, ಮುಕ್ತ, ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಬದ್ಧರಾಗಿದ್ದೇವೆ. ವಿಶ್ವ ವಾಣಿಜ್ಯ ಸಂಘಟನೆಯ ಧ್ಯೇಯಗಳಿಗೂ ಬದ್ಧರಾಗಿದ್ದೇವೆ ಎಂದು, ಭ್ರಷ್ಟಾಚಾರ, ಅಕ್ರಮ ಹಣ, ಅಕ್ರಮ ಹಣದ ಹರಿವು, ವಿದೇಶಗಳಲ್ಲಿ ಸೇರಿಕೊಂಡಿರುವ ಲೆಕ್ಕಕ್ಕೆ ಸಿಗದ ಸಂಪತ್ತು ಇವು ಜಾಗತಿಕ ಸವಾಲುಗಳು. ಇವು ಆರ್ಥಿಕ ಬೆಳವಣಿಗೆ ಮೇಲೆ ಋಣಾತ್ಮಕ ಪರಿಹಾರ ಬೀರಲಿದೆ” ಎಂದು ನಾಯಕರು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

error: Content is protected !!