ತುಂಬೆ ಕಾಲೇಜಿನಲ್ಲಿ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ
ಬಂಟ್ವಾಳ: ಪಾಠದೊಂದಿಗೆ ಆಟವನ್ನೂ ಮೈಗೂಡಿಸಿಕೊಂಡಲ್ಲಿ ಶಿಸ್ತು, ಏಕಾಗ್ರತೆ, ಕಲಿಕಾ ಸಾಮರ್ಥ್ಯ ಮತ್ತು ವಿಕಾಸವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವ ಹೇಳಿದರು.
ತುಂಬೆ ಕಾಲೇಜಿನ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಲ್ಲಿ ಪಂದ್ಯಾಟದಲ್ಲಿ ಭಾಗವಹಿಸುವವರು ಮುಂದೆ ಜೀವನದ ವಿವಿಧ ಮಜಲುಗಳನ್ನು ಸಮರ್ಥವಾಗಿ ಎದುರಿಸಲು ಶಕ್ತರಾಗಿರುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಿದ್ದಕಟ್ಟೆಯ ಗುಣಶ್ರೀ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಡಾ| ಸಂತೋಷ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು.
ಜಿಲ್ಲಾ ಕ್ರೀಡಾ ಸಂಯೋಜಕರಾದ ಪ್ರೇಮನಾಥ ಶೆಟ್ಟಿ, ದೈಹಿಕ ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷ ಸುಚೇತನ್ ಜೈನ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಪ್ಪ, ಉಮೇಶ್ ಮೊಡಂಕಾಪು, ಶ್ರೀನಿವಾಸ್ ಅಳಿಕೆ, ಉಪನ್ಯಾಸಕ ಸುರೇಶ್ ನಂದೊಟ್ಟು, ದೈಹಿಕ ಶಿಕ್ಷಣ ಸಂಘದ ನಿರ್ದೇಶಕ ಸುಂದರ್, ದೈಹಿಕ ಶಿಕ್ಷಣ ಶಿಕ್ಷಕಿ ಎಲೈಝಾ, ಮೋಲಿ ಎಡ್ನಾ, ತುಂಬೆಯ ಅಬ್ದುಲ್ ಕರೀಂ, ಯೋಗೀಶ್ ಬೊಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು.
ತುಂಬೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ. ಸಾಯಿರಾಮ್ ನಾಯಕ್ ವಂದಿಸಿ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ಬಿ., ಸ್ವಾಗತಿಸಿ, ನಿರೂಪಿಸಿದರು.
ಬಾಲಕರ ಸ್ಪರ್ಧೆಯಲ್ಲಿ ಬಂಟ್ವಾಳ ಎಸ್.ವಿ.ಎಸ್ ಕಾಲೇಜು ಪ್ರಥಮ, ಸಿದ್ಧಕಟ್ಟೆಯ ಗುಣಶ್ರೀ ಪ.ಪೂ. ಕಾಲೇಜು ದ್ವಿತೀಯ ಸ್ಥಾನವನ್ನು ಗಳಿಸಿತು. ಬಾಲಕಿಯರ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ ಪ.ಪೂ.ಕಾಲೇಜು ಪ್ರಥಮ ಹಾಗೂ ಸಿದ್ಧಕಟ್ಟೆಯ ಗುಣಶ್ರೀ ಪ.ಪೂ. ಕಾಲೇಜು ದ್ವಿತೀಯ ಸ್ಥಾನವನ್ನು ಗಳಿಸಿತು.