ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಕೋರ್ಟ್‌ಗೆ ಹಾಜರು : ಆ.9 ಕ್ಕೆ ವಿಚಾರಣೆ ಮುಂದೂಡಿಕೆ
ಮಡಿಕೇರಿ ಜು.೨೩ :ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್‌ನನ್ನು ಬಿಗಿ ಭದ್ರತೆಯಲ್ಲಿ ಇದೀಗ ೮ನೇ ಬಾರಿಗೆ ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ರೂಪೇಶ್‌ನನ್ನು ಸೋಮವಾರ ಸಂಜೆ ವೇಳೆಯಲ್ಲಿ ಮಡಿಕೇರಿಗೆ ಕರೆತಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು. ಇಂದು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಆಗಮಿಸಿದ ರೂಪೇಶ್, ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್ ಬಾರಿ ಜಿಂದಾಬಾದ್ ಎಂದು ಘೋಷಣೆ ಕೂಗಿ ನ್ಯಾಯಾಲಯ ಆವರಣ ಪ್ರವೇಶಿಸಿದ. ಬಳಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ.ವಿ.ಮಲ್ಲಾಪುರ ಅವರ ಎದುರು ಶಂಕಿತ ನಕ್ಸಲ್ ಮುಖಂಡ ರೂಪೇಶ್‌ನನ್ನು ಹಾಜರುಪಡಿಸಲಾಯಿತು.
ಪ್ರಕರಣದ ಕುರಿತು ಪರ-ವಿರೋಧ ವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ಮುಂದಿನ ವಿಚಾರಣೆಯನ್ನು ಆ.9 ಕ್ಕೆ ಮುಂದೂಡಿದರು.
ರಾಜ್ಯ ಗುಪ್ತ ದಳ, ರಾಜ್ಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಫ್ತಿಯಲ್ಲಿ ನ್ಯಾಯಾಲಯದ ಆವರಣದಲ್ಲಿ ಹಾಜರಿದ್ದರು.
ನಗರ ಠಾಣೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಪೊಲೀಸ್ ಸರ್ಪಗಾವಲಿನಲ್ಲಿ ರೂಪೇಶ್‌ನನ್ನು ಕೇರಳದ ವೈವೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.