ಟೋಲ್ ಗೇಟ್ ನಲ್ಲಿ ಸಿಬ್ಬಂದಿ ಮಿಂಚಿನ ಮುಷ್ಕರ
ಪಡುಬಿದ್ರಿ: ಇಲ್ಲಿನ ನವಯುಗ ಕಂಪೆನಿಯ ಸುಂಕ ಪಾವತಿ ಕೇಂದ್ರದಲ್ಲಿ ಸುಂಕ ವಸೂಲಾತಿ ಸಿಬ್ಬಂದಿ ಮಿಂಚಿನ ಮುಷ್ಕರ ನಡೆಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿರುವ ಸಿಬಂದಿಗಳಿಗೆ ಕಳೆದ ಒಂದು ತಿಂಗಳಿನಿಂದ ವೇತನ ಪಾವತಿ ಆಗದಿರುವ ಕಾರಣ ಇಂದು ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ದಿಢೀರ್ ಮುಷ್ಕರಕ್ಕೆ ಇಳಿದರು.
ಆಗಸ್ಟ್ 15ರಂದು ಇವರಿಗೆಲ್ಲಾ ವೇತನ ಪಾವತಿಸುವುದಾಗಿ ಗುತ್ತಿಗೆ ಕಂಪೆನಿ ಭರವಸೆ ನೀಡಿತ್ತು, ಆದರೆ ದಿನ ಕಳೆದರೂ ವೇತನವನ್ನು ಪಾವತಿ ಮಾಡಿರಲಿಲ್ಲ. ಇದರಿಂದಾಗಿ ಶುಕ್ರವಾರ ಮಧ್ಯಾಹ್ನದ ಶಿಫ್ಟ್ ನಲ್ಲಿದ್ದ ಸುಮಾರು 97 ಸಿಬಂದಿಗಳು ದಿಢೀರ್ ಮುಷ್ಕರಕ್ಕೆ ಇಳಿದಿದ್ದಾರೆ.
ಟೋಲ್ ಸಿಬಂದಿಗಳ ಮುಷ್ಕರದಿಂದಾಗಿ ಪಡುಬಿದ್ರಿ ಟೋಲ್ ಕೇಂದ್ರದಲ್ಲಿ ಇದೀಗ ವಾಹನಗಳು ಮುಕ್ತವಾಗಿ ಸಂಚರಿಸುತ್ತಿವೆ. ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.
ಮಾರ್ಕೊಲೈನ್ ಎಂಬ ಗುತ್ತಿಗೆದಾರ ಕಂಪೆನಿ ಈ ಹಿಂದೆ ಇಲ್ಲಿ ಟೋಲ್ ಸಂಗ್ರಹಣೆಯ ಜವಾಬ್ದಾರಿ ವಹಿಸಿಕೊಂಡಿತ್ತು. ಬಳಿಕ ಇಲ್ಲಿ ಅದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಇದೀಗ ಟಿ.ಬಿ.ಆರ್. ಎಂಬ ಕಂಪೆನಿಯು ಟೋಲ್ ಸಂಗ್ರಹಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಇಲ್ಲಿ ಕೆಲಸ ಮಾಡುತ್ತಿರುವ ಸಿಬಂದಿಗಳ ಪಿ.ಎಫ್. ಅನ್ನೂ ಸಹ ಜನವರಿ ತಿಂಗಳಿನಿಂದ ಕಂಪೆನಿಯು ಜಮಾ ಮಾಡಿಲ್ಲ ಎಂಬೆಲ್ಲಾ ವಿಚಾರಗಳ ಹಿನ್ನಲೆಯಲ್ಲಿ ಈ ಮುಷ್ಕರ ನಡೆಯುತ್ತಿದೆ ಎಂದು ತಿಳಿದುಬಂದಿದೆ.