ಪ್ರವಾಹ ಇಳಿಕೆಯಾಗುತ್ತಿದ್ದಂತೆ ಬೆಳಗಾವಿ ಜನರಿಗೆ ಈಗ ಕಳ್ಳರ ಸಮಸ್ಯೆ!

ಬೆಳಗಾವಿ: ಇಲ್ಲಿಯವರೆಗೆ ಭಾರೀ ಮಳೆ, ಪ್ರವಾಹದಿಂದ ಬೆಳಗಾವಿ ಜನರಿಗೆ ವಿಪರೀತ ಸಂಕಷ್ಟವಾದರೆ ಇದೀಗ ಕಳ್ಳರ ಕಾಟ ಅಲ್ಲಿನ ಜನರನ್ನು ಕಂಗಾಲಾಗಿಸಿದೆ. ಮಳೆಯಿಂದ ಪ್ರವಾಹದ ಭೀತಿಯಿಂದ ಸ್ಥಳಾಂತರಗೊಂಡಿದ್ದ ಜನರು ಮಳೆ ನಿಂತು ಪ್ರವಾಹ ಇಳಿದ ಮೇಲೆ ಮನೆಗೆ ಬಂದು ನೋಡುವಾಗ ಮನೆಯಲ್ಲಿನ ವಸ್ತು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಪ್ರವಾಹಪೀಡಿತ ತಾಲ್ಲೂಕುಗಳಾದ ಗೋಕಾಕ್, ಚಿಕ್ಕೋಡಿ, ಅಥಣಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿನ ಮನೆಗಳಲ್ಲಿ ಕಳ್ಳತನವಾಗಿದೆ. ಚಿಕ್ಕೋಡಿಯ ಸುರೇಶ್ ರಾಮಾ ಪಾಟೀಲ್ ನಿರಾಶ್ರಿತ ತಾಣದಿಂದ ಮನೆಗೆ ಹಿಂತಿರುಗಿ ಬಂದು ನೋಡಿದಾಗ ಅವರ ಮನೆಯಲ್ಲಿನ ಹಲವು ವಸ್ತುಗಳು ಕಾಣೆಯಾಗಿವೆ. ಮನೆಯ ಸೀಲಿಂಗ್ ಫ್ಯಾನ್ ನ್ನು ಕೂಡ ಕಳ್ಳರು ಬಿಟ್ಟಿಲ್ಲ ಎಂದು ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಗೋಕಾಕ್ ನಿವಾಸಿ ಅಬ್ಬಾಸ್ ಶೇಖ್ ಮನೆಯಲ್ಲಿ ಕೂಡ ಕಳ್ಳತನವಾಗಿದೆ. ಪ್ರವಾಹಕ್ಕೆ ಮೊದಲು ಶೇಖ್ ತಮ್ಮ ಮನೆಯಲ್ಲಿರುವ ವಸ್ತುಗಳನ್ನೆಲ್ಲಾ ಕಟ್ಟಿ ಶೆಲ್ಫ್ ನಲ್ಲಿಟ್ಟಿದ್ದರಂತೆ. ಅವರು ಹಿಂತಿರುಗಿ ಬಂದು ನೋಡಿದಾಗ ಅವರ ಮನೆಯಲ್ಲಿನ ಮೌಲ್ಯಯುತ ವಸ್ತುಗಳೆಲ್ಲಾ ಕಳವಾಗಿದೆ. ಕಳ್ಳರು ಅಗತ್ಯ ಸಾಮಗ್ರಿಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಕೂಡ ಬಿಟ್ಟಿಲ್ಲವಂತೆ.

ಕಳ್ಳರು ಈಜುವುದರಲ್ಲಿ ಕೂಡ ನಿಪುಣರಾಗಿರಬೇಕು. ಕೆಲ ದಿನಗಳ ಹಿಂದೆ ಪ್ರವಾಹ ಪೀಡಿತ ಮನೆಯಿಂದ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಯುವಕರ ಗುಂಪು ಹಿಡಿದು ಥಳಿಸಿದ ಘಟನೆ ಗೋಕಾಕ ಪಟ್ಟಣದಲ್ಲಿ ನಡೆದಿತ್ತು. ಆದರೆ ಕಳ್ಳರು ತಪ್ಪಿಸಿಕೊಂಡಿದ್ದರು.
ಇನ್ನು ಪರಿಹಾರದ ಹೆಸರಿನಲ್ಲಿ ಬರುತ್ತಿರುವ ಬಿಸ್ಕೆಟ್, ನೀರಿನ ಬಾಟಲ್ ಮತ್ತು ಇತರ ಕೆಲ ವಸ್ತುಗಳನ್ನು ಮಾರಾಟ ಮಾಡಿ ಹಣ ಮಾಡಿಕೊಂಡು ಪರಿಸ್ಥಿತಿಯ ಲಾಭ ಮಾಡಿಕೊಳ್ಳುವವರೂ ಇದ್ದಾರೆ.

ಪ್ರವಾಹ ಪೀಡಿತ ಪ್ರದೇಶಕ್ಕೆ ಬಂದ ಪರಿಹಾರ ಸಾಮಗ್ರಿಗಳನ್ನು ಜನರು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಪರಿಹಾರ ನೀಡುವವರು ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ನೀಡಬೇಕೆಂದು ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!