ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಸಾವು
ನೋಯ್ಡ: ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಹೃದಯಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಭಾನುವಾರ ಸಂಜೆ ದೆಹಲಿ ಸಮೀಪದ ಗಜಿಯಾಬಾದ್‌ನಲ್ಲಿ ಈ ಘಟನೆ ನಡೆದಿರುವುದಾಗಿ ನೋಯ್ಡ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಟ್ರಾಫಿಕ್ ಪೊಲೀಸರು ಈ ವೇಳೆ ಅಲ್ಲಿದ್ದರು ಎಂದಿದ್ದಾರೆ. ಟ್ರಾಫಿಕ್ ಪೊಲೀಸರೊಂದಿಗೆ ನಡೆದ ವಾಗ್ವಾದದಿಂದಲೇ ತಮ್ಮ ಮಗನಿಗೆ ಹೃದಯಾಘಾತ ಸಂಭವಿಸಿತು ಎಂದು ಮೃತನ ತಂದೆ ತಾಯಿ ಆರೋಪಿಸಿದ್ದಾರೆ.
‘ಮೃತ ವ್ಯಕ್ತಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾರೆ. ಅವರಿಗೆ ಮಧುಮೇಹ ಇತ್ತು. ವೃದ್ಧ ತಂದೆ ತಾಯಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಅವರನ್ನು ಟ್ರಾಫಿಕ್ ಪೊಲೀಸರು ಗಜಿಯಾಬಾದ್ ತಿರುವಿನಲ್ಲಿ ತಡೆದು ಪರಿಶೀಲನೆ ಕೈಗೊಂಡಿದ್ದರು,’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಹೊಸ ಮೋಟಾರು ವಾಹನ ಕಾಯಿದೆಯ ಕಟ್ಟು ನಿಟ್ಟಿನ ಪಾಲನೆಗಾಗಿ ಪರಿಶೀಲನೆಯ ನೆಪದಲ್ಲಿ ಪೊಲೀಸರು ನಮ್ಮ ಮಗನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಮೃತನ ತಂದೆ ತಾಯಿ ಆರೋಪಿಸಿದ್ದಾರೆ. ಯಾವುದೇ ಕೆಲಸ ಮಾಡಲೂ ಒಂದು ವಿಧಾನ ಎಂಬುದಿರುತ್ತದೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಕಾನೂನಿನ ಬದಲಾವಣೆ ಮಾಡಿರುವುದು ಉತ್ತಮವಾದ ಬೆಳವಣಿಗೆಯೇ.
ಆದರೆ, ಪೊಲೀಸರು ಯಾವುದೇ ವಾಹನವ ಪರಿಶೀಲಿಸುವುದಿದ್ದರೆ ಸಭ್ಯವಾಗಿ ನಡೆದುಕೊಳ್ಳಬೇಕು. ನಾವು ಅಜಾಗರುಕವಾಗಿ ವಾಹನ ಚಲಾಯಿಸಿರಲಿಲ್ಲ. ಕಾರಿನಲ್ಲಿ ವೃದ್ಧರಿದ್ದಾರೆ ಎಂಬುದನ್ನೂ ಲೆಕ್ಕಿಸದೇ ಪೊಲೀಸರು ಕಾರಿಗೆ ಬೆತ್ತದಿಂದ ಬಡಿದರು. ಇದು ಪರಿಶೀಲನೆ ನಡೆಸುವ ವಿಧಾನವಂತೂ ಅಲ್ಲ. ಈ ರೀತಿ ಮಾಡಲು ಯಾವ ಕಾನೂನು ಅನುಮತಿಸುವುದಿಲ್ಲ,’ ಎಂದು ಆವರು ಪೊಲೀಸರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು.
‘ಪೊಲೀಸರು ಸೌಜನ್ಯದಿಂದ ವರ್ತಿಸಿದ್ದನ್ನು ಇತ್ತೀಚಿನ ದಿನಗಳಲ್ಲಿ ನಾನಂತೂ ನೋಡಿಲ್ಲ. ಆದರೆ, ನನ್ನ ಮಗನನ್ನು ಕಳೆದುಕೊಂಡೆ. ನನ್ನ ಐದು ವರ್ಷದ ಮೊಮ್ಮಗಳು ತಂದೆಯನ್ನು ಕಳೆದುಕೊಂಡಿದ್ದಾಳೆ. ಇನ್ನು ಮುಂದೆ ಅವಳನ್ನು ನೋಡಿಕೊಳ್ಳುವವರು ಯಾರು? ದೇಶದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ನನಗೆ ನ್ಯಾಯ ಒದಗಿಸಿಕೊಡುತ್ತಾರೆಂದು ನಾನು ನಂಬಿದ್ದೇನೆ,’ ಎಂದಿದ್ದಾರೆ.