ಸಮಾಜ ಸೇವಕ ಮೊಹಮ್ಮದ್ ಫಾರೂಕ್ “ಸಾಧಕ ರತ್ನ ಪ್ರಶಸ್ತಿ”ಗೆ ಆಯ್ಕೆ
ಕಾಸರಗೋಡು: ಕರ್ನಾಟಕ ಜಾನಪದ ಪರಿಷತ್ತು ಕಾಸರಗೋಡು ಘಟಕ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು ತಾಲೂಕು ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪಾವಳ ಪೈವಳಿಕೆ ವಲಯ ಇವುಗಳ ಜಂಟಿ ಆಶ್ರಯದಲ್ಲಿ ಭಾನುವಾರ ಜುಲೈ 21 ಬೆಳಿಗ್ಗೆ ವರ್ಕಾಡಿ ಸೈಂಟ್ ಜೋಸೆಫ್ ಶಾಲಾ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರುಗಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಪರ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಮತ್ತು ವಿಶೇಷವಾಗಿ ವಿವಿಧ ಸಂಘ ಸಂಸ್ಥೆಯಲ್ಲಿ ಮುಂಚೂಣಿಯಲ್ಲಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ, ಮೊಹಮ್ಮದ್ ಫಾರೂಕ್ ಚಂದ್ರನಗರ ಮತ್ತು ಕುಂಬಳೆ ಸೀಮೆಯ ಖ್ಯಾತ ದೈವನರ್ತಕರಾದ ಡಾ. ರವೀಶ ಪರವ ಪಡುಮಲೆ ಯವರ ಸಾಧನೆಯನ್ನು ಗುರುತಿಸಿ “ಸಾಧಕ ರತ್ನ ಪ್ರಶಸ್ತಿ” ನೀಡಿ ಗೌರವಿಸಲಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಕು।ಕೆ.ಜಿ. ನಾಗಲಕ್ಷ್ಮಿ ಬಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ವಿಧಾನಸಭೆಯ ಮಾನ್ಯ ಉಪಸಭಾಧ್ಯಕ್ಷರು ಎಂ ಕೃಷ್ಣ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಧುರೀಣರು ಮತ್ತು ವಿವಿಧ ಧರ್ಮದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.