ಸಿದ್ದಾರ್ಥ್ ಕಣ್ಮರೆ ಪ್ರಕರಣ – ಶೋಧ ಕಾರ್ಯ ಸ್ಥಗಿತಗೊಳಿಸಿದ ಜಿಲ್ಲಾಡಳಿತ
ಮಂಗಳೂರು: ಉದ್ಯಮಿ ಸಿದ್ಧಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಕಾರ್ಯಾಚರಣೆ ನಡೆಸಿದ್ದ ಜಿಲ್ಲಾಡಳಿತ ಶೋಧಕಾರ್ಯವನ್ನು ಸ್ಥಗಿತಗೊಳಿಸಿದೆ. ರಾತ್ರಿ ನೀರಿನ ರಭಸ ಹೆಚ್ಚಾಗಿರುವುದರಿಂದ ಶೋಧಕಾರ್ಯ ಸ್ಥಗಿತಗೊಳಿಸಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸತತ 29 ಗಂಟೆಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಾತ್ರಿ 9.30ರ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಮೂರು ಪೊಲೀಸ್ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ನಡೆಸಿದೆ. ಇಂದು ಸಂಜೆ ಮಾಹಿತಿ ನೀಡಿದ್ದ ಅಧಿಕಾರಿಗಳು ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದಿದ್ದರು. ಆದರೆ ನೀರಿನ ರಭಸ ಹೆಚ್ಚಾದ ಹಿನ್ನೆಲೆಯಲ್ಲಿ ಬೇರೆ ಯಾವುದೇ ಅವಘಡ ನಡೆಯದಿರುವ ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಮತ್ತೆ ಶೋಧಕಾರ್ಯ ಮುಂದುವರಿಸುವುದಾಗಿ ಜಿಲ್ಲಾಡಳಿತ ವಿವರಣೆ ನೀಡಿದೆ.
ಪೊಲೀಸ್ ಕಾರ್ಯಾಚರಣೆ ನಡೆಸಿರುವ ಮೂರು ತಂಡಗಳಲ್ಲಿ ಒಂದು ತಂಡ ಸೇತುವೆ ಬಳಿ ಇದ್ದರೆ, ಮತ್ತೆರಡು ತಂಡಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದೆ. ಸಿದ್ಧಾರ್ಥ್ ಅವರು ಸೇತುವೆ ಇಂದ ಹಾರಿದ್ದಾರೆ ಎಂಬ ಬಗ್ಗೆ ಇದುವರೆಗೂ ಯಾವುದೇ ಖಚಿತ ಮಾಹಿತಿಯೂ ಲಭಿಸಿಲ್ಲ. ಆದರೆ ಕೆಲ ಅನುಮಾನಗಳ ಮೇಲೆ ಮಾತ್ರ ಹುಡುಕಾಟ ನಡೆಸಲಾಗುತ್ತಿದೆ
ಈಗಾಗಲೇ ಪೊಲೀಸ್ ತಂಡ ಪ್ರಕರಣ ಸಂಬಂಧ ಪ್ರಾಥಮಿಕ ತನಿಖೆಯನ್ನು ಅಂತ್ಯಗೊಳಿಸಿದ್ದಾರೆ. ಮುಂಜಾನೆಯಿಂದ ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರನ್ನು ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಸಿದ್ಧಾರ್ಥ್ ಮೊಬೈಲ್ ಲೋಕೇಷನ್ ಪರಿಶೀಲಿಸಿದಾಗ ಸೇತುವೆಯ ಮಧ್ಯಭಾಗದಲ್ಲಿ ಅವರ ಕೊನೆಯ ಮೊಬೈಲ್ ಲೋಕೇಷನ್ ಪತ್ತೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.