ಸಿದ್ದರಾಮಯ್ಯ ಸರ್ಕಾರ ಟೀಕಿಸುವ ಭರದಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ: ಕೋಟ

ಉಡುಪಿ:ಮುಜರಾಯಿ ಇಲಾಖೆಯಿಂದ 1 ಸಾವಿರ ಸಿಬ್ಬಂದಿ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಪೈಕಿ 650 ಸಿಬ್ಬಂದಿಗೆ ಇಲಾಖೆ ವೇತನ ಭರಿಸಲಿದ್ದು, ಉಳಿದ 350 ಮಂದಿಗೆ ಸರ್ಕಾರದಿಂದ ವೇತನ ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ ಹಾಗೂ ಸಿ ದರ್ಜೆಯ ಪ್ರಮುಖ ದೇವಸ್ಥಾನಗಳಿಗೆ 650 ಸಿಬ್ಬಂದಿಯನ್ನು ತುರ್ತಾಗಿ ನೇಮಕ ಮಾಡುವ ಅಗತ್ಯವಿದ್ದು, ಈ ಪ್ರಕ್ರಿಯೆಯನ್ನು ಇಲಾಖೆ ಶೀಘ್ರದಲ್ಲಿ ನಿಯಮಾನುಸಾರ ಮಾಡಲಿದೆ. ಉಳಿದ 350 ಸಿಬ್ಬಂದಿಯನ್ನು ಸರ್ಕಾರ ನಿಯೋಜಿಸಲಿದೆ ಎಂದರು.


ಕಾಯಂ ಹುದ್ದೆಯಲ್ಲಿರುವ ಸಿಬ್ಬಂದಿಗೆ 6ನೇ ವೇತನ ಆಯೋಗ ಜಾರಿಗೊಳಿಸಬೇಕೆಂಬ
ಬೇಡಿಕೆಯಿದ್ದು, ಅದರಂತೆ ಕೆಲವು ದೇಗುಲಗಳಲ್ಲಿ ವೇತನ ನೀಡಲಾಗುತ್ತಿದೆ. ಯಾವುದೇ
ದೇವಸ್ಥಾನದ ಆದಾಯದ ಶೇ. 35ರಷ್ಟು ಒಳಗೆ ಸಿಬ್ಬಂದಿಯ ವೇತನ ಇರಬೇಕೆಂಬ ನಿಯಮವಿದೆ. ಅದರಂತೆ ದೇಗುಲದ ಆರ್ಥಿಕ ಶಕ್ತಿಗೆ ಅನುಗುಣವಾಗಿ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದರು.


ಗುತ್ತಿಗೆ ಆಧಾರದಲ್ಲಿರುವ ಸಿಬ್ಬಂದಿಯ ವೇತನ ಪರಿಷ್ಕರಣೆ ಹಾಗೂ ಅವರನ್ನು
ಕಾಯಂಗೊಳಿಸುವುದರ ಜತೆಗೆ ಪಿಎಫ್‌, ಇಎಸ್‌ಐ ಸೌಲಭ್ಯ ನೀಡಬೇಕೆಂಬ ಬೇಡಿಕೆ ಇದೆ.
ಇದಕ್ಕೆ ಸರ್ಕಾರ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಆ ಸಮಿತಿಯ ವರದಿಯ ಆಧಾರದಲ್ಲಿ
ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಸುಮಾರು 100 ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದನ್ನು ಯಶಸ್ವಿಯಾಗಿಸಲು ಅಗತ್ಯ ಕ್ರಮಗಳನ್ನು
ಕೈಗೊಳ್ಳಲಾಗುತ್ತಿದೆ ಎಂದರು.


ಸಿದ್ದರಾಮಯ್ಯ ಸರ್ಕಾರ ಟೀಕಿಸುವ ಭರದಲ್ಲಿ ಅನೇಕ ಬಾರಿ ತಾಳ್ಮೆ ಕಳೆದುಕೊಂಡಿದ್ದಾರೆ.
ಪ್ರಸ್ತುವ ಅವರ ಧ್ವನಿಯಲ್ಲಿ ಹಿಂದಿನ ಸಂಘಟನಾತ್ಮಕ ಚತುರತೆ ಕಳೆಗುಂದಿದ್ದು, ಅವರು
ಏಕಾಂಗಿಯಾಗಿದ್ದಾರೆ. ದೇವೇಗೌಡರು ಈ ದೇಶದ ಪ್ರಧಾನಿಯಾಗಿದ್ದವರು, ಅವರನ್ನು ನಮ್ಮ ಪಕ್ಷ ಯಾವತ್ತೂ ಗೌರವಿಸುತ್ತದೆ. ಆದರೆ ಉಪಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಯಾವುದೇ ಒಳ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮದ್ಯದಂಗಡಿಗಳಿಗೆ ದೇವರ ಹೆಸರು ಇಟ್ಟಿರುವ ಬಗ್ಗೆ ಸಾರ್ವಜನಿಕರಿಂದ ಬಂದಿರುವ ಸಲಹೆ ಸೂಚನೆಗಳನ್ನು ಅಬಕಾರಿ ಹಾಗೂ ಕಾನೂನು ಇಲಾಖೆ ಜತೆಗೆ ಚರ್ಚಿಸಿ ಕಡತವೊಂದನ್ನು ಮಂಡಿಸುವಂತೆ ಮುಜರಾಯಿ ಇಲಾಖೆಗೆ ಸೂಚಿಸಿದ್ದೇನೆ. ಇದು ಚರ್ಚಾ ಹಂತದಲ್ಲಿದ್ದು, ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಯಾರು ಆತಂಕ, ಗೊಂದಲ ಪಡಬೇಕಾದ ಅಗತ್ಯವಿಲ್ಲ. ಟಿಪ್ಪು ಜಯಂತಿ ರದ್ಧತಿ ಹಾಗೂ ಟಿಪ್ಪು ವಿಚಾರ ಪಠ್ಯಪುಸ್ತಕದಿಂದ ತೆರವು ಈ ವಿಷಯಗಳು ಪುನರ್‌ ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!