ರಾಜಿ ಸಂಧಾನ ದಂಧೆಗೆ ಎಚ್ಚರಿಕೆಯ ಘಂಟೆಯಾದ ಎಸ್‌ಐ ಅಮಾನತು!
ಉಡುಪಿ(ಉಡುಪಿ ಟೈಮ್ಸ್ ವರದಿ): ಠಾಣೆಯಲ್ಲಿ ಕೆಲವೊಂದು ಪ್ರಕರಣಗಳು ರಾಜಿ ಸಂಧಾನ ನಡೆಸಿ, ಹಿರಿಯ ಅಧಿಕಾರಿಗಳಿಗೆ ಹಣ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟು ದೂರು ನೀಡಲು ಬಂದ ಮತ್ತು ಆರೋಪಿಗಳಿಂದ ಸಾವಿರದಿಂದ, ಲಕ್ಷಾಂತರ ರೂಪಾಯಿ ದೋಚುವ ಕೆಲವೊಂದು ಪೊಲೀಸ್ ಸಿಬ್ಬಂದಿಗೆ ಉಡುಪಿ ಎಸ್ಪಿಯವರು ಇಬ್ಬರು ಪೊಲೀಸರನ್ನು ಅಮಾನತು ಮಾಡಿರುವ ನಿರ್ಧಾರ ಸರಿಯಾಗಿದೆನ್ನುವ ಮಾತು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ತಮ್ಮ ಠಾಣಾ ವ್ಯಾಪ್ತಿ ಮಾತ್ರವಲ್ಲದೆ ಹತ್ತಿರದ ಕೆಲವೊಂದು ಠಾಣೆಗಳ ಮಾಹಿತಿ ಇರುವ ಪೊಲೀಸರು ಯಾವುದೇ ಪ್ರಕರಣ ಠಾಣೆಗೆ ಬಂತೆಂದರೆ ಸಾಕು ಇವರಿಗೆ ಆ ದಿನ ಹಬ್ಬವೋ ಹಬ್ಬ. ದೂರು ನೀಡಲು ಬಂದವರಿಂದಲೂ, ಆರೋಪ ಎದುರಿಸುವವರಿಂದಲೂ ಹಿರಿಯ ಅಧಿಕಾರಿಗಳಿಗೆ ಇಂತಿಷ್ಟು ಮೊತ್ತ ನೀಡಬೇಕಾಗಿದೆಂದು ರಾಜಿ ಸಂಧಾನ ಮಾಡಿ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತದೆನ್ನುವ ಸಾರ್ವಜನಿಕರ ಆರೋಪವಾಗಿದೆ.
ಕಳೆದ ನ. 2ರಂದು ಉಡುಪಿಯ ಅಜ್ಜರಕಾಡು ಪಾರ್ಕ್‌ನಲ್ಲಿ ನಡೆದ ಘಟನೆಯೂ ಇದೇ ರೀತಿ ರಾಜಿ ಪಂಚಾಯತಿಕೆ ನಡೆಸಲೆಂದು ಬಂದ ಹೆಡ್ ಕಾನಸ್ಟೇಬಲ್ ಈ ಪ್ರಕರಣದಲ್ಲಿ ಸರಿಯಾಗಿ ತಗಾಲೊಕೊಂಡ, ಠಾಣಾಧಿಕಾರಿ ಅನಂತ ಪದ್ಮನಾಭ ಬಲಿಪಶುವಾಗಿದ್ದಾರೆ.
ಕೆಲವೊಂದು ಪೊಲೀಸ್ ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್‌ಗಳು ಸ್ಥಳೀಯವಾಗಿ ಮಾಹಿತಿಯನ್ನು ಚೆನ್ನಾಗಿ ಅರಿತವರು. ಠಾಣೆಗೆ ಬಂದ ಪ್ರತಿಯೊಂದು ಪ್ರಕರಣವನ್ನು ರಾಜಿ ಸಂಧಾನ ಮೂಲಕ ಬಗೆಹರಿಸಿ ಹಿರಿಯ ಅಧಿಕಾರಿಗಳಂತೆ ವರ್ತಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ದೂರು ಕೇಳಿ ಬರುತ್ತಿದೆ.
ಯಾವುದೇ ಪ್ರಕರಣ ಇರಲಿ, ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಲು ಇವರು ಟೊಂಕಕಟ್ಟಿ ನಿಲ್ಲುತ್ತಾರೆ . ಈ ಸಂದರ್ಭ ಎರಡೂ ಕಡೆಯಿಂದಲೂ ಹಿರಿಯ ಅಧಿಕಾರಿಗಳಿಗೆ ಇಂತಿಷ್ಟು ಹಣ ಪಾವತಿಸಬೇಕು ಎಂಬ ಬೇಡಿಕೆ ಇಡುತ್ತಾರೆ .ಈ ರೀತಿ ಹಲವಾರು ಪ್ರಕರಣಗಳಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ಐಷಾರಾಮಿ ಜೀವನ ಸಾಗಿಸುವ ಕೆಲವೊಂದು ಪೊಲೀಸರು ತಮಗೆ ರೌಡಿಸಂ, ಅಂಡರ್ವರ್ಲ್ಡ್ ,ರಾಜಕೀಯ ವ್ಯಕ್ತಿಗಳ ಪ್ರಭಾವವಿದೆ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಮೊನ್ನೆಯ ಘಟನೆಯು ಈ ರೀತಿ ರಾಜಿ ಸಂಧಾನವೆಂಬ ವಸೂಲಿ ಬಾಜಿಗಿಳಿಯುವ ಪೊಲೀಸರಿಗೆ ಪಾಠವಾಗಲಿ.