ನಮ್ ಎಮ್ಮೆಲ್ಲೆಗಳಿಗೆ ನಾಚಿಕೆ-ಮಾನ-ಮರ್ಯಾದೆ ಇಲ್ವಾ….

( ಎಕ್ಸ್‌ಕ್ಲೂಸಿವ್ ರಿಪೋರ್ಟ್ ಎಸ್ಸೆನ್ ಕುಂಜಾಲ್‌ರಿಂದ)

ನನ್ನ ಗಂಡ ಸತ್ಹೋಗಿ ಆರು ವರ್ಷವಾಯ್ತು. ಮೂವರು ಮಕ್ಕಳಿದ್ದಾರೆ. ನಾನೀಗ ಸಣ್ಣ ರೂಮಿನಲ್ಲಿ ಪುಟಾಣಿಗಳೊಂದಿಗೆ ಬದುಕುತ್ತಿದ್ದೇನೆ. ಹನುಮಂತಪ್ಪ ಎಂಬ ಬೆಸ್ಕಾಂ ಅಧಿಕಾರಿಯ ಕೆಂಗೇರಿಯಲ್ಲಿರುವ ಮನೆಗೆ ಕೆಲ್ಸಕ್ಕೆ ಹೋಗಿ ಬರ್‍ತೇನೆ. ಮತ್ತೊಂದೆರೆಡು ಅಪಾರ್ಟ್‌ಮೆಂಟಿಗೂ ಕೆಲ್ಸಕ್ಕೆ ಹೋಗಿ ಬರ್‍ತೇನೆ. ಇದ್ರಲ್ಲೇ ನನ್ ಸಂಸಾರ ಹೊಗ್ಬೇಕು. ಲಾಕ್ ಡೌನ್‌ನಿಂದ ಹೊಟ್ಟೆಗೆ ಹಿಟ್ಟಿಲ್ಲದಂತಾಗಿದೆ. ಮಕ್ಳು ‘ಅಮ್ಮಾ ಹಸಿವಾಗ್ತದೆ’ ಅಂತ ಕಿರುಚಾಡ್ತಾರೆ. ಮನೆ ಕೆಲ್ಸಕ್ಕೆ ಹೋಗ್ಹೊಂಗಿಲ್ಲ. ಈಚೆ ಸಂಬ್ಳನೂ ಯಾರು ಕೊಡ್ತಿಲ್ಲ. ಲಾಸ್ಟ್ ಅಸೆಂಬ್ಲಿ ಎಲೆಕ್ಷನ್ ಟೈಮಲ್ಲಿ ಎಮ್‌ಎಲ್‌ಎ ಕ್ಯಾಂಡಿಡೇಟು 25 ಸಾವಿರ ಕೊಟ್ರು. ಕಾರ್ಪೋರೇಟರ್ ಚುನಾವಣೇಲೂ ಒಂದಿಷ್ಟು ಸಾವಿರ ಬಂದಿತ್ತು. ‘ನಾವ್ ಗೆದ್ರೆ ನಿಮ್ಮನ್ನು ಚೆನ್ನಾಗಿ ನೋಡ್ಕೋತೇವೆ’ ಅಂತ ಆವತ್ತು ಅಂದಿದ್ರು. ಈಗ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿ ಮಲಗಬೇಕಾದ ಸ್ಥಿತಿ ನಂದು. ಅವರು ಆವಾಗ ಕೊಟ್ಟ ಮೊಬೈಲಿಗೆ ಕಾಲ್ ಮಾಡಿದ್ರೆ ಸ್ವಿಚ್ಡಾಫ್’.


ಇದು ಬಾಪೂಜಿ ನಗರದ ವಿಮಲಳ ಮಾತು. ಹೀಗೇನೇ ಮಣಿಪಾಲ ಟೈಗರ್ ಸರ್ಕಲ್ಲಿನ ಬಳಿ ಪಾನಿಪೂರಿ ಮಾರಿ ಬದುಕುತ್ತಿದ್ದ ಪರ್ಕಳದ ರಾಜೇಶಂದೂ ಪ್ರಾಬ್ಲಮ್ಸ್. ನಂಗೆ ಇಬ್ರು ಮಕ್ಳು. ಒಬ್ಬಳು ಐದನೇ ಕ್ಲಾಸು. ಇನ್ನೊಬ್ಬ ಸೆವೆಂತ್ ಸ್ಟೇಂಡರ್ಡ್. ಹೆಂಡ್ತಿ ಉಬ್ಬಸದಿಂದ ಮಲಗಿದ್ದಾಳೆ. ಡೈಲಿ ಪಾನಿಪೂರಿ ಸಂಪಾದಿಸಿದ ಹಣವೇ ಆಯಾ ದಿನದ ಬದುಕು ಸಾಗಿಸ್ತದೆ. ಲಾಕ್ ಡೌನ್ ನಂತರ ಪಾನಿಪೂರಿ ಅಂಗಡಿ ಓಪನ್ ಮಾಡುವ ಹಾಗಿಲ್ಲ. ದಿನನಿತ್ಯದ ಊಟಕ್ಕೇ ಗತಿ ಇಲ್ಲದಂತಾಗಿದೆ. ಮಕ್ಳಂತೂ ಬೊಬ್ಬೆ ಹೊಡೀತಾರೆ ಹೀಗೇ ಸಾಗುತ್ತದೆ ಒಬ್ಬೊಬ್ಬರ ಕಣ್ಣೀರ ಗಾಥೆ-ಆತಂಕಕಾರಿ ಕ್ಷಣ. ನಿಜಕ್ಕೂ ಬದುಕೇ ಬೇಡ ಎಂಬಂತಹ ದಯನೀಯ ಸ್ಥಿತಿ ಅವರದ್ದು.

ತುತ್ತು ಅನ್ನ ತಿನ್ನೋಕೇ…..

ನೀವೇ ಗಮನಿಸುತ್ತಾ ಬನ್ನಿ; ಒಬ್ಬ ಆಟೋರಿಕ್ಷಾ ಓಡಿಸೋನು, ರೋಡ್‌ಸೈಡಲ್ಲಿ ಪಾನ್ ಬೀಡಾ ಇಟ್ಕೊಂಡವನು, ಡೈಲಿ ತಲೆ ಮೇಲೆ ಹೂವಿನ ಬುಟ್ಟಿ ಹೊತ್ಕೊಂಡು ಬರೋಳು, ಹಳ್ಳೀಂದ ತರ್‍ಕಾರಿ ತಂದು ಮಾರೋನು, ಟೀ-ಕಾಫಿ ಸ್ಟಾಲ್ ಇಟ್ಕೊಂಡ ಚಿಲ್ರೆ ವ್ಯಾಪಾರಿ, ಬಸ್ಸು ಡ್ರೈವರು, ಕಂಡಕ್ಟರು, ಕ್ಲೀನರು, ಕಾರ್ ಓಡಿಸೋ ಚಾಲಕ, ಗ್ಯಾರೇಜಿನೋನು, ಶೂ ಪಾಲಿಶ್ ಮಾಡೋನು, ಆಫೀಸಿಗೆ ಹೋಗೋ ಹುಡ್ಗಿ, ಟೈಲರ್-ಪ್ಲಂಬರ್-ಕಾರ್ಪೆಂಟರ್ ಹೀಗೇ ಹೊಟ್ಟೆಪಾಡಿಗಾಗಿ ದುಡಿಯೋರ ಬದುಕು ಅಕ್ಷರಶ: ಬೀದಿಗೆ ಬಿದ್ದಂತಾಗಿದೆ.

ಪ್ಯಾಂಟು-ಶರ್ಟು-ಸೀರೆ!


ಹೌದು; ಇವರ ಕಣ್ಣೀರ ಕಥೆ ಕೇಳೋರ್‍ಯಾರು? ಒಂದಿಬ್ಬರು ಶಾಸಕರನ್ನ ಬಿಟ್ಟರೆ ಬೇರಾರೂ ಮನೆ ಹೊಸ್ತಿಲು ದಾಟಿ ಹೊರಬರುತ್ತಿಲ್ಲ. ಏಸಿಯೊಳಗೆ ಐಷಾರಾಮಿ ಜೀವನ ಮಾಡ್ತಿದ್ದಾರೆ. ಈ ಶಾಸಕರಿಗೆ, ಸಂಸದರಿಗೆ ಒಂದು ಎಲೆಕ್ಷನ್ ಬರ್‍ಬೇಕು. ಆಗ ನೋಡಿ ಮಿರಿ ಮಿರಿ ಮಿನುಗ್ತಾ ರೋಡಿಗಿಳೀತಾರೆ. ಮನೆ-ಮನೆಗೆ ಬರ್‍ತಾರೆ. ಕಾಲಿಗೆ ಬೀಳ್ತಾರೆ. ನಮಸ್ಕಾರ ಮಾಡ್ತಾರೆ. ಪ್ಯಾಂಟು-ಶರ್ಟು-ಸೀರೆ-ಜೀನ್ಸು ಎಲ್ಲವನ್ನೂ (ಒಳಗಿದ್ದೊಂದನ್ನ ಬಿಟ್ಟು) ಕೈಯಾರೆ ಕೊಡ್ತಾರೆ. ಜತೆಗೆ ಒಂದಿಷ್ಟು ದುಡ್ಡು ಕೈಗಿಡ್ತಾರೆ. ಗೋಲ್ಡ್ ಕಾಯಿನ್ ಕೂಡಾ ಕೊಡ್ತಾರೆ. ಕ್ಯಾನ್ವಾಸ್‌ಗೆ ಅಂತ ವೋಲಂಟಿಯರ್ಸ್‌ಗೆ ದಿನಕ್ಕಿಷ್ಟು ಸಾವಿರ, ವೆಹಿಕಲ್‌ಗೆ ಇನ್ನೊಂದಿಷ್ಟು, ಬೂತ್ ಸಮಾವೇಶಕ್ಕಂತ ಮತ್ತಷ್ಟು ಕೋಟಿ ಹೀಗೇ ಒಬ್ಬ ಎಮ್ಮೆಲ್ಲೆ ಎಲೆಕ್ಷನ್ನಿಗೆ ಅಂತ ಹತ್ತರಿಂದ ಐವತ್ತು ಕೋಟಿ ಖರ್ಚು ಮಾಡ್ತಾನೆ. ಹೀಗೇನೇ ಎಂ.ಪಿ. ಆಗಬೇಕಾದವ ಎಪ್ಪತ್ತು ಕೋಟಿ ತನಕ ಹಂಚ್ತಾನೆ. ನಾಳೆ ಸಡನ್ನಾಗಿ ಎಲೆಕ್ಷನ್ ಅನೌನ್ಸ್ ಆದ್ರೆ ಇಷ್ಟೊಂದು ಹಣ ಖರ್ಚು ಮಾಡೋಕೆ ರೆಡಿ ಇರೋ ಈ ಮನುಷ್ಯ ಕೊರೋನಾ ಬಂದಾಗ ಹಾಯಾಗಿ ಪವಡಿಸಿದ್ದಾನೆಂದರೆ ಏನರ್ಥ?

ಹಲ್ಕಾಗಳ ಥರ್ಟಿ ಪರ್ಸಂಟ್!

ಮೀನು ಮಾರೋ ಮಲ್ಪೆಯ ಜಯಕ್ಕ ಹೇಳೋದು ಹೀಗೆ. ನಮ್ ಶಾಸಕರಿಗೆ, ಸಂಸದರಿಗೆ ಏನಾದರೂ ನಾಚಿಕೆ-ಮಾನ-ಮರ್ಯಾದೆ ಇದ್ಯಾ? ಮೂವತ್ತು ಪರ್ಸಂಟ್ ಕೊಡ್ತಾರಂತೆ. ಯಾವುದ್ರಲ್ಲಿ ಮೂವತ್ತು ಪರ್ಸಂಟ್? ಅವರ ಇನ್‌ಕಮ್‌ನಲ್ಲಿ ಮೂವತ್ತು ಪರ್ಸಂಟ್ ಕೊಡ್ಲಿ. ಇವರೇನು ನಮ್ಹಂಗೆ ಮೀನು ಮಾರಿ ಬದುಕ್ತಾರಾ? ಅವರ ಸಂಬ್ಳದಲ್ಲಿ ಜೀವನ ತೆಗೀತಾರಾ? ಒಬ್ಬೊಬ್ಬ ಶಾಸಕ ಓಡಾಡೋ ಕಾರು, ಅವ್ನ ಮನೆ ಖರ್ಚು ಇದೆಲ್ಲಾ ಲೆಕ್ಕ ಹಾಕಿದ್ರೆ ಅದೇ ದಿನಕ್ಕೆ ಲಕ್ಷ ಆಗ್ತದೆ. ಅಷ್ಟೇ ಅಲ್ಲ; ಇದರ ಜತೆಗೆ ಕಣ್ಣು ಒರ್‍ಸೊಕೆ ಒಬ್ಳು, ಮೂಗು ಒರ್‍ಸೋಕೆ ಒಬ್ಳು, ಕೈಕಾಲು ಮಸಾಜಿಗೆ ಮತ್ತೊಬ್ಳು ಹಿಂಗೇ ಎಷ್ಟು ಜನ ಕೆಲ್ಸಕ್ಕಿರ್‍ತಾರೆ? ಹಲ್ಕಾಗಳಿವ್ರು ಥರ್ಟಿ ಪರ್ಸಂಟ್ ಕೊಡ್ತಾರಂತೆ! ಹೀಗೆ ಹೇಳೋಕೆ ನಾಚಿಕೆ ಆಗಲ್ವಾ ಅವ್ರಿಗೆ? ಅಲ್ಲಿ ರತನ್ ಟಾಟಾ ಒಂದೂವರೆ ಸಾವಿರ ಕೋಟಿ ಕೊಡ್ತೇನೆ ಅಂತ ಹೇಳಿದ್ದಾನೆ. ಕಷ್ಟಕಾಲ ಬಂದ್ರೆ ದೇಶಕ್ಕಾಗಿ ಎಲ್ಲಾ ಆಸ್ತಿ ಕೊಡ್ತೇನೆ ಎಂದಿದ್ದಾನೆ. ಈ ಶಾಸಕರು, ಸಂಸದರಿಗೆ ಮರ್ಯಾದೆ ಇದ್ರೆ ತಮ್ಮ ಇನ್‌ಕಮ್‌ನ ಅರ್ಧಾಂಶ ಕೊಟ್ಟು ಬಡವರ ಪ್ರಾಣ ಊಳಿಸಲಿ ಅಂತ ಒಮ್ಮಿಂದೊಮ್ಮೆಗೇ ಸಿಡಿಲಿನಂತೆ ಅಬ್ಬರಿಸಿದ್ದಾಳೆ.

ಪೊರಕೆ ಹಿಡ್ಕೊಂಡು ಓಡಿಸ್ತೇವೆ!

ಹೌದು; ಎಮ್ಮೆಲ್ಲೆ- ಎಂಪಿ ಕಥೆ ಹಾಗಾಯ್ತಲ್ವಾ.. ಈ ಪಂಚಾಯ್ತಿ ಅಧ್ಯಕ್ಷರುಗಳು, ಮೆಂಬರುಗಳು, ಕಾರ್ಪೋರೇಶನ್ನಿನವರು, ಎಮ್ಮೆಲ್ಸಿಗಳು ಯಾರ್ ಮನೇಲಿ ಮಲಗಿದ್ದಾರೆ? ಬರ್‍ಲಿ ನೆಕ್ಸ್ಟ್ ಎಲೆಕ್ಷನ್. ಪೊರಕೆ ಹಿಡ್ಕೊಂಡು ಓಡಿಸ್ತೇವೆ ಅಂತಿದ್ದಾರೆ ಜನ. ಇವಕ್ಕೆಲ್ಲಾ ಕಾರಣವಾದದ್ದು ಲಾಕ್‌ಡೌನ್ ಅವಾಂತರ. ಅದರೊಂದಿಗೆ ಟೀವಿ ಮುಂದೆ ನಿಂತು ಫುಡ್ ಕೊಡ್ತೇವೆ. ಫುಡ್ ಐಟಮ್ ಕೊಡ್ತೇವೆ ಎಂಬಂತೆ ಹೊಡೀತಿರೋ ಸುಳ್ಳು ಡೈಲಾಗು.

ಲಾಸ್ಟ್ ಸಿಪ್!
ಈ ಮಧ್ಯೆ ‘ಬಜಾಜ್’ ಕಂಪನಿಯ ಎಂ.ಡಿ. ರಾಜೀವ್ ಬಜಾಜ್‌ರು ಬಾಂಬ್ ಒಂದನ್ನ ಸಿಡಿಸಿದ್ದಾರೆ. ಅದು ಲಾಕ್ ಡೌನ್ ಕುರಿತಾದ ಸಿಕ್ರೇಟ್ಸ್. ಹಾಗೇನೇ ನಮ್ಮ ಸಿಎಂ ಯಡಿಯೂರಪ್ಪಾಜಿ ವಿಜಯನಗರ, ಯಶವಂತಪುರ, ಗೋರಗುಂಟೆಪಾಳ್ಯ ಸುತ್ತಾಡಿದ್ದಾರೆ. ಇದರಲ್ಲಿ ಟೀವಿಯವರ ಮಾಸ್ಟರ್ ಡೀಲಿಂಗಿನ ಝಲಕ್ ಈಗ ತಾನೇ ಬಯಲಿಗೆ ಬರ್‍ತಿದೆ. ಸಿಎಂ ಕೊಡೋ ಜಾಹೀರಾತೆಂಬ ಹಣಕ್ಕಾಗಿ ಟೀವಿಯಲ್ಲೂ ಸುಳ್ಳೇ ಪ್ರಸಾರವಾಗ್ತಿದೆ. ಇದರ ರಿಯಾಲಿಟಿಯನ್ನ ನಾಳೆ ಇದೇ ಅಂಕಣದಲ್ಲಿ ನಿಮ್ಮ ಮುಂದೆ ಹೇಳಲಿದ್ದೇನೆ.

-ಎಸ್ಸೆನ್ ಕುಂಜಾಲ್ ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್[email protected]ಗೆ ಕಳುಹಿಸಬಹುದು ಅಥವಾ ದೂರವಾಣಿ 9845070166 ಗೆ ಕರೆ ಮಾಡಬಹುದು

Leave a Reply

Your email address will not be published. Required fields are marked *

error: Content is protected !!