ಶಿರ್ವ: ಶಾಂತಿಯುತ ಪ್ರತಿಭಟನಾ ಮೆರವಣಿಗೆ

ಶಿರ್ವ : ಫಾ.ಮಹೇಶ್ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿ ಅವರ ಅಭಿಮಾನಿಗಳು ಶಿರ್ವ ದೇವಾಲಯದ ವಠಾರದಿಂದ ಶಿರ್ವ ಪೊಲೀಸ್ ಠಾಣೆಯವರೆಗೆ ಶಾಂತಿಯುತ ಪಾದಯಾತ್ರೆಯ ಮೆರವಣಿಗೆ ನಡೆಯಿತು, ಪ್ರತಿಭಟನೆಗೆ ಶಿರ್ವ ಪರಿಸರದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ವರ್ತಕರು ಮೆರವಣಿಗೆಗೆ ಬೆಂಬಲವನ್ನು ಸೂಚಿಸಿದ್ದಾರೆ.

ಫಾ. ಮಹೇಶ್ ನಿಗೂಢ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ಆಗಬೇಕೆಂದು ಶನಿವಾರ ಮತ್ತು ಆದಿತ್ಯವಾರ ಶಿರ್ವ ದೇವಾಲಯದ ವಠಾರದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಇಂದು ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸಮಗ್ರ ತನಿಖೆಗೆ ಆಗ್ರಹಿಸಿ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಲು ಅಭಿಮಾನಿಗಳು ಶಾಂತಿಯುತ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಪಂಚಾಯತ್ ಸದಸ್ಯರು ಮತ್ತು ಚರ್ಚ್ ಪಾಲನಾ ಮಂಡಳಿಯ ಸದಸ್ಯರಾದ ಸುನೀಲ್ ಕಬ್ರಾಲ್, ಕೊರ್ನಾಡ್ ಕಸ್ತಲಿನೊ, ಜಾನ್ಸನ್ ಕೆಸ್ತಲಿನೊ ನೇತೃತ್ವದಲ್ಲಿ ಶಿರ್ವ ದೇವಾಲಯದ ವಠಾರದಿಂದ ಪಾದಯಾತ್ರೆಯ ಮೂಲಕ ಶಿರ್ವ ಆರಕ್ಷಕ ಠಾಣೆಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಿರ್ವ ದೇವಾಲಯದ ಭಕ್ತಾದಿಗಳು ಸೇರಿದಂತೆ ಉಡುಪಿ ಧರ್ಮಪ್ರಾಂತ್ಯದ ವಿವಿಧ ದೇವಾಲಯಗಳ ಭಕ್ತರು ಮತ್ತು ಜಾತಿ ಧರ್ಮ ಭೇದವಿಲ್ಲದೆ ಸಾವಿರಾರು ಜನರು ಜಾತಿಭೇದ ಮರೆತು ಭಾಗವಹಿಸಿದರು. ಪಾದಯಾತ್ರೆ ಸಾಗುವ ಸಂದರ್ಭದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ವರ್ತಕರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಲ್ಸನ್ ರೊಡ್ರಿಗಸ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಫುಟಾರ್ಡೋ, ತಾಲ್ಲೂಕು ಪಂಚಾಯಿತಿ ಸದಸ್ಯ ಮೈಕಲ್ ರಮೇಶ್, ಬಿಜೆಪಿ ಮುಖಂಡ ಕುತ್ಯಾರು ನವೀನ್ ಶೆಟ್ಟಿ, ಪ್ರಮುಖರಾದ ವಿಲ್ಸನ್ ಡಿಸೋಜ, ವಾಲ್ಟರ್ ಸಿರಿಲ್ ಪಿಂಟೊ, ಮೆಲ್ವಿನ್ ಡಿಸೋಜ, ದೀಪಿಕಾ ಶಾಲೆಟ್, ಲೀನಾ ಮಥಾಯಸ್, ಮೆಲ್ವಿನ್ ಅರಾನ್ನ ಭಾಗವಹಿಸಿದ್ದರು.

1 thought on “ಶಿರ್ವ: ಶಾಂತಿಯುತ ಪ್ರತಿಭಟನಾ ಮೆರವಣಿಗೆ

Leave a Reply

Your email address will not be published. Required fields are marked *

error: Content is protected !!