ಶಿರ್ವ : ಮಾದಕ ದ್ರವ್ಯ , ರಸ್ತೆ ಸುರಕ್ಷತೆ ಮತ್ತು ಪೋಕ್ಸೋ ಕಾಯಿದೆ ಬಗ್ಗೆ ಕಾನೂನು ಮಾಹಿತಿ
ಶಿರ್ವ : ಇಂದಿನ ಯುವಜನತೆ ಸಮಾಜದ ಆಸ್ತಿಯಾಗಿದ್ದು ರಾಷ್ಟ್ರದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. 15ರಿಂದ 25 ವರ್ಷದವರೆಗಿನ ಯುವಜನತೆ ಹೆಚ್ಚಾಗಿ ಮಾದಕ ದ್ರವ್ಯ ಸೇವನೆ ಚಟಕ್ಕೆ ಬಲಿ ಬೀಳುತ್ತಿದ್ದು ನಿಜಕ್ಕೂ ದುರದೃಷ್ಟ. ಶೋಕಿಗಾಗಿ ಸೇವಿಸಿದ ದ್ರವ್ಯ ಸೇವನೆ ಬಳಿಕ ವ್ಯಸನವಾಗಿ ಪರಿಣಮಿಸುತ್ತಿದ್ದು ಈ ವಯಸ್ಸಿನಲ್ಲಿ ಮಕ್ಕಳು ಬಹಳ ಜಾಗ್ರತೆ ವಹಿಸಬೇಕಾಗಿದೆ. ವಿದ್ಯಾರ್ಥಿಗಳು ಕಾನೂನು ಕ್ರಮಗಳನ್ನು ಸರಿಯಾಗಿ ಪಾಲಿಸಿಕೊಂಡು ಯಾವುದೇ ದುಶ್ಚಟಗಳಿಗೆ ಬಲಿ ಬೀಳದೆ ವಿದ್ಯಾರ್ಜನೆಗೆ ಒತ್ತು ನೀಡುವ ಮೂಲಕ ದೇಶದ ಪ್ರಜ್ಞಾವಂತ ನಾಗರೀಕರಾಗಿ ಬಾಳಿ ಎಂದು ಜಿಲ್ಲಾ ಪೊಲೀಸ್ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪಿ. ಕೃಷ್ಣಕಾಂತ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ಲಯನ್ಸ್ ಕ್ಲಬ್ ಶಿರ್ವ ಮಂಚಕಲ್ ಮತ್ತು ಶಿರ್ವ ಸಂತ ಮೇರಿ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಶನಿವಾರ ಶಿರ್ವ ಸಾವುದ್ ಸಭಾಭವನದಲ್ಲಿ ನಡೆದ ಮಾದಕ ದ್ರವ್ಯ , ರಸ್ತೆ ಸುರಕ್ಷತೆ ಮತ್ತು ಪೋಕ್ಸೋ ಕಾಯಿದೆ ಬಗ್ಗೆ ಕಾನೂನು ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
18 ವರ್ಷದೊಳಗಿನ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಪೋಕ್ಸೋ ಕಾಯಿದೆ ಹಾಗೂ ಮಹಿಳೆಯರ ರಕ್ಷಣೆಯ ಬಗ್ಗೆ ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಮೇರಿ ಮತ್ತು ಡಾನ್ ಬಾಸ್ಕೋ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾ. ಡೆನ್ನಿಸ್ ಡೇಸಾ ಮಾತನಾಡಿ , ಮಾದಕ ದ್ರವ್ಯ , ರಸ್ತೆ ಸುರಕ್ಷತೆ, ಪೋಕ್ಸೊ ಕಾಯಿದೆ ಬಗ್ಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಪೊಲೀಸ್ ಇಲಾಖೆಯನ್ನು ಅಭಿನಂದಿಸಿ, ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ಮೇಲೆ ಇಲಾಖೆ ಮತ್ತು ಸ್ಥಳೀಯ ಆಡಳಿತ ನಿಗಾ ವಹಿಸಿದರೆ ಬದಲಾವಣೆ ಸಾಧ್ಯ ಎಂದರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಲಯನ್ಸ್ ಕ್ಲಬ್ ಶಿರ್ವ – ಮಂಚಕಲ್ ಅಧ್ಯಕ್ಷ ಕ್ಯಾನ್ಯೂಟ್ ಮತಯಸ್ , ಕಾರ್ಯದರ್ಶಿ ಲ್ಯಾನ್ಸಿ ಕೊರ್ಡ, ಸಂಯೋಜಕಿ ಪ್ರೊ. ಯಶೋಧಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿರ್ವ ಎಎಸ್ಐ ಕೃಷ್ಣ , ಮಹಿಳಾ ಹೆಡ್ ಕಾನ್ಸ್ಟೆಬಲ್ ಗಳು, ಪಿಸಿಗಳು, ಲಯನ್ಸ್ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಶಿಕ್ಷಕ ವೃಂದಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ. ರಾಜನ್ ವಿ.ಎನ್ ಸ್ವಾಗತಿಸಿದರೆ, ಉಪನ್ಯಾಸಕಿ ಪ್ರೊ. ಅನುಜಾ ನಿರೂಪಿಸಿದರು. ಜಿಲ್ಲಾ ಪಂಚಾಯತ ಸದಸ್ಯ ವಿಲ್ಸನ್ ರೊಡ್ರಿಗಸ್ ವಂದಿಸಿದರು.