ಹರ್ಯಾಣ ಬಿಜೆಪಿಗೆ ಹಿನ್ನಡೆ: ರಾಜ್ಯಾಧ್ಯಕ್ಷ ರಾಜೀನಾಮೆ
ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಬರಾಲಾ ರಾಜೀನಾಮೆ ನೀಡಿದ್ದು, ಪಕ್ಷ ಹಿನ್ನಡೆಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದಾರೆ.
ಚುನಾವಣೆಯಲ್ಲಿ ಪಕ್ಷದ ಹಿನ್ನಡೆಯೊಂದಿಗೆ ಸ್ವತಃ ಸುಭಾಷ್ ಸ್ಪರ್ಧೆ ಮಾಡಿರುವ ತೋಹಾನಾ ಕ್ಷೇತ್ರದಲ್ಲಿ ಅವರು ಭಾರೀ ಹಿನ್ನಡೆ ಅನುಭವಿದ್ದಾರೆ. ಈ ಕಾರಣಕ್ಕೆ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಕಳೆದ 5 ವರ್ಷದಿಂದ ಅಧಿಕಾರದಲ್ಲಿದ್ದ ಐವರು ಬಿಜೆಪಿ ಸಚಿವರು ಕೂಡ ಹಿನ್ನಡೆ ಅನುಭವಿಸಿದ್ದು, ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಅಧಿಕಾರದಲ್ಲಿ ಇದ್ದರೂ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು ಬಿಜೆಪಿಗೆ ಭಾರೀ ಹೊಡೆತ ನೀಡಿದೆ.
ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿಯನ್ನು ಮುಂದಿಟ್ಟುಕೊಳ್ಳದೆ ಕೇವಲ ಭಾವನಾತ್ಮಕ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾತ್ರ ಕೇಂದ್ರಿಕರಿಸಿ ಚುನಾವಣೆಯನ್ನು ಎದುರಿಸಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.
ಒಟ್ಟು 90 ಕ್ಷೇತ್ರಗಳ ಹರ್ಯಾಣ ವಿಧಾನಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ 47 ಸ್ಥಾನಗಳನ್ನು ಬಿಜೆಪಿ ಜಯಗಳಿಸುವ ಮೂಲಕ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು. ಓಂ ಪ್ರಕಾಶ್ ಚೌಟಾಲ ನೇತೃತ್ವದ ಇಂಡಿಯನ್ ನ್ಯಾಷನಲ್ ಲೋಕ್ ದಳ 19, ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಎಲ್ಲ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.