ಸುಪ್ರೀಂ ಆದೇಶ ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡುವಂತಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸುಪ್ರೀಂಕೋರ್ಟ್ ಆದೇಶವೇ ತಪ್ಪು ಎನ್ನುವ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.
ಕುಮಾರ ಕೃಪಾ ಗೆಸ್ಟ್ ಹೌಸ್ ಬಳಿ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಅತೃಪ್ತ ಶಾಸಕರು ರಾಜೀನಾಮೆಗೂ ಮುನ್ನ ಬಿಜೆಪಿ ನಾಯಕರ ಜೊತೆಗೆ ಕಾಣಿಸಿಕೊಂಡಿದ್ದಾರೆ. ರೆಬಲ್ ಶಾಸಕರು ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ. ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಒಂದು ಕಡೆ ಸ್ಪೀಕರ್ ಅವರ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ. ಆದರೆ ಕೋರ್ಟ್ ಶಾಸಕಾಂಗದಲ್ಲಿ ಅನಾವಶ್ಯಕವಾಗಿ ಹಸ್ತಕ್ಷೇಪ ಮಾಡಿದೆ ಎಂದು ಹೇಳಿದರು.
ತಮ್ಮ ಪಕ್ಷದ ಶಾಸಕರಿಗೆ ವಿಪ್ ನೀಡುವ ಅಧಿಕಾರ ನಮಗಿದೆ. ಅಧಿವೇಶನಕ್ಕೆ ಬರಲೇಬೇಕು ಎಂದು ಶಾಸಕರಿಗೆ ಒತ್ತಾಯ ಮಾಡುವಂತಿಲ್ಲ ಅಂತ ಸುಪ್ರೀಂಕೋರ್ಟ್ ಹೇಳುತ್ತದೆ. ವಿಪ್ ನೀಡಬೇಕೋ? ನೀಡಬಾರದೋ ಎನ್ನುವುದರ ಬಗ್ಗೆ ಸುಪ್ರೀಂಕೋರ್ಟ್ ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. ಇದರಿಂದಾಗಿ ಈ ಆದೇಶವು ತಪ್ಪು ಸಂದೇಶ ಕೊಡುತ್ತದೆ ಎಂದರು.
ಶಾಸಕರು ಅನರ್ಹರಾಗುತ್ತರೆ ಎನ್ನುವ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಡಿಲ್ಲ. ಅವರಿಗೆ ಸರ್ಕಾರ ಬೀಳಬೇಕು ಅಷ್ಟೇ. ಪಕ್ಷದ ಶಾಸಕರಿಗೆ ವಿಪ್ ನೀಡುವುದು ತಪ್ಪೇ? ಸರ್ಕಾರರನ್ನು ಬೀಳಿಸುವವರಿಗೆ, ಕುದುರೆ ವ್ಯಾಪಾರ ನಡೆಸುವವರಿಗೆ ಸುಪ್ರೀಂಕೋರ್ಟ್ ಆದೇಶ ಅನುಕೂಲ ಮಾಡಿಕೊಡುವಂತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಅವರು, ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ. ಅಷ್ಟೇ ಅಲ್ಲದೆ ಈ ಕುರಿತು ಯಾವುದೇ ಚರ್ಚೆ ಆಗಿಲ್ಲ. ಅದೆಲ್ಲಾ ಊಹಾಪೋಹ ಎಂದು ಹೇಳಿದರು.