ಸೇವಾ ಮಾಹಿತಿ ಮತ್ತು ಸುದ್ದಿ ಸಮಾಚಾರ ಪ್ರಸಾರ : ಆಕಾಶವಾಣಿಗೆ ಮನವಿ ಸಲ್ಲಿಸಿದ ಕೊಡವ ಸಮಾಜ

ಮಡಿಕೇರಿ ಜು.೧೭ :  ಮಡಿಕೇರಿ ಆಕಾಶವಾಣಿಯ ಮೂಲಕ ಬಿತ್ತಾರವಾಗುತ್ತಿರುವ ಸೇವಾ ಮಾಹಿತಿ ಮತ್ತು ಸುದ್ದಿ ಸಮಾಚಾರವನ್ನು ಈ ಹಿಂದೆ ನಿಗಧಿ ಪಡಿಸಿದ ಸಮಯದಲ್ಲೇ ಪ್ರಸಾರ ಮಾಡಬೇಕೆಂದು ಒತ್ತಾಯಿಸಿ ಮಡಿಕೇರಿ ಕೊಡವ ಸಮಾಜದ ಪ್ರಮುಖರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ್ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.

ಮಡಿಕೇರಿ ಆಕಾಶವಾಣಿ ಇತ್ತೀಚೆಗೆ ಕೆಲವು ಕಾರ್ಯಕ್ರಮಗಳಲ್ಲಿ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಿದ್ದು, ಇದರಿಂದ ಕೊಡಗಿನ ಕೇಳುಗರು ಬೇಸರಗೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಬೆಳಗ್ಗೆ 7.30ಕ್ಕೆ ಪ್ರಸಾರವಾಗುತ್ತಿದ್ದ ಸುದ್ದಿ ಸಮಾಚಾರದ ಸಮಯ 7.45 ಕ್ಕೆ ಬದಲಾವಣೆಯಾಗಿದೆ. ಕೊಡಗಿನ ಜನತೆ ಕೃಷಿಕರಾಗಿದ್ದು, ಬೆಳಗ್ಗಿನ 7.30 ರ ಸುದ್ದಿ ಸಮಾಚಾರವನ್ನು ಆಲಿಸಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದರು. ಈ ಸಮಯ ಬದಲಾವಣೆಯಿಂದಾಗಿ ಜಿಲ್ಲೆಯ ರೇಡಿಯೊ ಕೇಳುಗರ ಸಂಖ್ಯೆ ಕ್ಷೀಣಿಸಿದೆ.

ಕೊಡಗಿನ ಮೂಲ ನಿವಾಸಿಗಳಾದ ಕೊಡವರ ಸಂಸ್ಕೃತಿಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ಸುದ್ದಿ ಅಂತಿಮದರ್ಶನ ಪಡೆಯುವ ದೃಷ್ಟಿಯಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇತರ ಮಾಧ್ಯಮಗಳ ಸುದ್ದಿ, ಸಂದೇಶ ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯ ಗ್ರಾಮಗಳಿಗೆ ಸಮಯಕ್ಕೆ ಸರಿಯಾಗಿ ತಲುಪದ ಕಾರಣ ಮತ್ತು ವಿದ್ಯುತ್ ಕೊರತೆ ಇರುವುದರಿಂದ ರೇಡಿಯೊ ಮಾಧ್ಯಮವೇ ಗ್ರಾಮೀಣ ಕೇಳುಗರ ನಿತ್ಯದ ಜೀವಾಳವಾಗಿದೆ. ಈಗಾಗಲೇ ಪ್ರಸಾರವಾಗುತ್ತಿರುವ ನಿಧನ ಸುದ್ದಿಯ ಸೇವಾ ಮಾಹಿತಿ ಜಿಲ್ಲೆಯ ಜನತೆಗೆ ಹೆಚ್ಚು ಉಪಕಾರಿಯಾಗಿದೆ.

 

ಸಂಜೆ ಹಾಗೂ ಬೆಳಗ್ಗೆ 7.00  ಗಂಟೆ ಮತ್ತು 7.30 ಕ್ಕೆ ಪ್ರಸಾರವಾಗುತ್ತಿದ್ದ ಸೇವಾ ಮಾಹಿತಿಯ ಸಮಯವನ್ನು ಕೇವಲ ಒಂದು ಬಾರಿ ಬೆಳಗ್ಗೆ 7.30 ಕ್ಕೆ ಮಾತ್ರ ಪ್ರಸಾರ ಮಾಡುವಂತೆಯೂ, ಸಂಜೆ ಪ್ರಸಾರ ಮಾಡದಂತೆಯೂ ನಿರ್ದೇಶನ ನೀಡಿರುವುದು ಸರಿಯಾದ ಕ್ರಮವಲ್ಲ.

ಬೆಳಗ್ಗೆ 7.30 ರ ನಂತರ ಬಂದಂತಹ ಸೇವಾ ಮಾಹಿತಿಯನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಿರುವುದು ಕೂಡ ಜಿಲ್ಲೆಯ ಜನರ ಭಾವನೆಗೆ ವಿರುದ್ಧವಾಗಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.

ತಾವು ಸೇವಾ ಮಾಹಿತಿ ಮತ್ತು ಸುದ್ದಿ ಸಮಾಚಾರದ ಮೇಲೆ ವಿಧಿಸಿರುವ ಎಲ್ಲಾ ನಿರ್ಬಂಧವನ್ನು ತಕ್ಷಣ ಹಿಂಪಡೆದು ಈ ಹಿಂದಿನಂತೆ ಸಂಜೆ ಹಾಗೂ ಬೆಳಗ್ಗೆ ಪ್ರಸಾರ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ್ ಅಂಗಡಿ ಅವರಲ್ಲಿ ಪ್ರಮುಖರು ಮನವಿ ಮಾಡಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ, ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಗೌರವ ಕಾರ್ಯದರ್ಶಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ, ನಿರ್ದೇಶಕರುಗಳಾದ ಬೊಳ್ಳಜಿರ ಬಿ.ಅಯ್ಯಪ್ಪ, ಕುಟ್ಟಿಚಂಡ ದೇವಯ್ಯ, ಪೊನ್ನಚೆಟ್ಟೀರ ಸುಬ್ಬಯ್ಯ, ಚೊಟ್ಟೆಯಂಡ ಅಪ್ಪಾಜಿ ಮತ್ತಿತರ ಪ್ರಮುಖರು ಹಾಜರಿದ್ದರು.

ಈ ಹಿಂದೆ ಪ್ರೇಮ ಕಾರ್ಯಪ್ಪ ಅವರು ರಾಜ್ಯಸಭಾ ಸದಸ್ಯರಾಗಿದ್ದಾಗ ಗುಡ್ಡಗಾಡು ಪ್ರದೇಶ ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಸೇವಾ ಮಾಹಿತಿಯ ಸುದ್ದಿ ಪ್ರಸಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಕೆಲವು ಬದಲಾವಣೆಗಳನ್ನು ಮಾಡಿದ್ದು, ಜನತೆಗೆ ಬೇಸರವಾಗಿದೆ. ಆದ್ದರಿಂದ ಈ ಹಿಂದಿನಂತೆ ಮತ್ತೆ ಸೇವಾ ಮಾಹಿತಿ ಮತ್ತು ಸುದ್ದಿ ಸಮಾಚಾರವನ್ನು ಆಕಾಶವಾಣಿ ಪ್ರಸಾರ ಮಾಡಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!