ಕರವೇ ಸ್ವಾಭಿಮಾನಿ ಬಣದಿಂದ ‘ಕನ್ನಡ ಶಾಲೆ ಉಳಿಸಿ, ಬೆಳೆಸಿ’ ಅಭಿಯಾನ

ಮಡಿಕೇರಿ  :  ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಕೊಡಗು ಜಿಲ್ಲೆಯಾದ್ಯಂತ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅಭಿಯಾನದ ಉದ್ಘಾಟನೆ ಹಾಗೂ ಮಡಿಕೇರಿ ತಾಲೂಕಿನ 10 ಶಾಲೆಯ ವಿದ್ಯಾರ್ಥಿಗಳಿಗೆ ಕುರ್ಚಿ ಮತ್ತು ಮೇಜು ವಿತರರಿಸುವ ಕಾರ್ಯಕ್ರಮ ಜು.20 ರಂದು ಪೆರಾಜೆಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಉನೈಸ್ ಪೆರಾಜೆ ಹಾಗೂ ಇತರರು, ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಇಂದಿನ ಸಮಯದಲ್ಲಿ ಕೊಡಗು ಜಿಲ್ಲೆಯಾದ್ಯಂತ ಕನ್ನಡ ಶಾಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಂಘಟನೆ ವತಿಯಿಂದ ಕನ್ನಡ ಶಾಲೆಗಳ ಸ್ಥಿತಿಗತಿಗಳ ಅಧ್ಯಯನ ನಡೆಸಲಾಗುವುದಲ್ಲದೆ, ಈ ಕುರಿತು ಸಂಬಂಧಿಸಿದವರ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು. ಈ ದಿಸೆಯಲ್ಲಿ ಜಿಲ್ಲೆಯ ಎಲ್ಲಾ 403 ಪ್ರಾಥಮಿಕ ಶಾಲೆಗಳಿಗೂ ಭೇಟಿ ನೀಡಲಾಗುವುದು ಎಂದರು.
ಜಿಲ್ಲೆಯ ಅನೇಕ ಕನ್ನಡ ಶಾಲೆಗಳ ಒಂದರಿಂದ  ಮೂರನೇ  ತರಗತಿವರೆಗಿನ ಮಕ್ಕಳು ಇಂದಿಗೂ ನೆಲದಲ್ಲಿ ಕುಳಿತು ಕಲಿಯುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಅಂತಹ ಶಾಲೆಗಳನ್ನು ಗುರುತಿಸಿ, ಕುರ್ಚಿ ಮತ್ತು ಮೇಜುಗಳನ್ನು ಸಂಘಟನೆ ವತಿಯಿಂದ ಕೊಡುಗೆಯಾಗಿ ನೀಡಲಾಗುವುದು. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ತೆರಳುವ ಮಕ್ಕಳ ಮತ್ತು ಪೋಷಕರ ಗಮನ ಸೆಳೆದು ಕನ್ನಡ ಶಾಲೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡುವಂತೆ ತಿಳಿಸಲಾಗುವುದು ಎಂದರು.
ಜಿಲ್ಲಾ ಉಪಾಧ್ಯಕ್ಷ ಸೂರಜ್ ಹೊಸೂರು ಮಾತನಾಡಿ ಇದು ಆರಂಭಿಕ ಹಂತದ ಪ್ರಯತ್ನವಾಗಿದ್ದು, ಜಿಲ್ಲೆಯ ಪ್ರತಿಯೊಂದು ಶಾಲೆಗೂ ಭೇಟಿ ನೀಡುವುದರೊಂದಿಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದು ಮತ್ತು ಶಾಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು ಎಂದರು. ಜು.೨೦ರಂದು ಪೆರಾಜೆ ಮತ್ತು ಮಡಿಕೇರಿ ವಲಯದ ಕನ್ನಡ ಪೆರಾಜೆ, ಕುಂಬಳಚೇರಿ, ಕೋಟೆ, ಅಮೆಚೂರು, ಕೋಡಿ, ಕುಂಡಾಡು, ಪುತ್ಯ ಕೊಯನಾಡು,. ಕಾಟಕೇರಿ ಹಾಗೂ ಗಾಳಿಬೀಡು ಶಾಲೆಗಳಿಗೆ ಕುರ್ಚಿ ಮತ್ತು ಮೇಜುಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ನೌಫಲ್, ಹಾಗೂ ಜಿಲ್ಲಾ ಮಾಧ್ಯಮ ಪ್ರತಿನಿಧಿ ಸತೀಶ್ ಪೆರಾಜೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!