ಬ್ಲಾಕ್‌ಮೇಲ್ ಸಂಘಟನೆಗಳ ವಿರುದ್ಧ ದೂರು ನೀಡಿ : ಜನರಲ್ ವರ್ಕರ್‍ಸ್ ಯೂನಿಯನ್ ಮನವಿ

ಮಡಿಕೇರಿ  :  ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಜನರಲ್ ವರ್ಕರ್‍ಸ್ ಯೂನಿಯನ್ ಸಂಘಟನೆಯು ಕಾರ್ಮಿಕ ಕಾಯ್ದೆಯ ಅನ್ವಯ, ಕಾನೂನಿನ ಚೌಕಟ್ಟಿನಡಿ ಕಾರ್ಮಿಕ ಪರವಾದ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿದೆಯೇ ಹೊರತು, ಎಲ್ಲಿಯೂ ರೈತರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲವೆಂದು ಸ್ಪಷ್ಟಪಡಿಸಿರುವ ಸಂಘಟನೆಯ ಅಧ್ಯಕ್ಷ ಡಾ. ಇ.ರ.ದುರ್ಗಾಪ್ರಸಾದ್ ಹಾಗೂ ಪ್ರಧಾನ ಕಾರ್ಯದರ್ಶಿ ಎ. ಮಹಾದೇವ್, ರೈತರನ್ನು ಬ್ಲಾಕ್‌ಮೇಲ್ ತಂತ್ರಕ್ಕೆ ಸಿಲುಕಿಸಿ ತೊಂದರೆ ನೀಡುತ್ತಿರುವ ಸಂಘಟನೆಗಳ ವಿರುದ್ಧ ಪೊಲೀಸರಿಗೆ ಹಾಗೂ ತಮಗೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸಂಘಟನೆಗಳು ಬ್ಲಾಕ್‌ಮೇಲ್ ತಂತ್ರದ ಮೂಲಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇದರಿಂದ ಕೊಡಗು ಜಿಲ್ಲಾ ಜನರಲ್ ವರ್ಕರ್‍ಸ್ ಯೂನಿಯನ್‌ನ ಬಗ್ಗೆಯೂ ತಪ್ಪು ಅಭಿಪ್ರಾಯ ಮೂಡಿರುವುದು ಕಂಡು ಬಂದಿದೆ. ಆದರೆ ನಮ್ಮ ಸಂಘಟನೆ ಕಾನೂನು ವ್ಯಾಪ್ತಿಯಲ್ಲೆ ಕಾರ್ಯಾಚರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ನಮ್ಮ ಸಂಘಟನೆಯು ಕಾರ್ಮಿಕರ ಪರ ಕಾಳಜಿ ವಹಿಸಿ ರೈತ ಮಿತ್ರನಾಗಿ ಕಾರ್ಯನಿರ್ವಹಿಸುತ್ತಿದೆಯೇ ಹೊರತು, ಶತ್ರುವಾಗಿ ಅಲ್ಲವೆಂದು ತಿಳಿಸಿದ ಅವರು, ಯಾರೂ ಕಾರ್ಮಿಕ ಸಂಘಟನೆಯನ್ನು ಶತ್ರುವಿನಂತೆ ಪರಿಗಣಿಸಬಾರದೆಂದು ಮನವಿ ಮಾಡಿದರು.

ಕಾರ್ಮಿಕ ಕಾಯ್ದೆಯ ಪ್ರಕಾರವೆ ಸಂಘಟನೆ ಕಾರ್ಯ ನಿರ್ವಹಿಸುತ್ತಿದ್ದು, ರೈತರಿಗೆ ಸಂಕಷ್ಟ ಎದುರಾದಾಗಲು ಹೋರಾಟದ ಮೂಲಕ ಸ್ಪಂದಿಸಿದೆ. ರೈತ ಉಳಿದರೆ, ದೇಶ ಉಳಿಯುತ್ತದೆ ಎನ್ನುವ ಪರಿಕಲ್ಪನೆಯಡಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಘಟನೆ ಎಲ್ಲಿಯೂ ಬ್ಲಾಕ್‌ಮೇಲ್ ತಂತ್ರವನ್ನು ಅಳವಡಿಸಿಕೊಂಡಿಲ್ಲ. ಬದಲಿಗೆ ಕನಿಷ್ಠ ವೇತನ ಸಿಗದೆ ದೌರ್ಜನ್ಯಕ್ಕೆ ಒಳಗಾದ ಕಾರ್ಮಿಕರು ಹಾಗೂ ಆದಿವಾಸಿಗಳ ಪರವಾಗಿ ಕಾನೂನಿನ ಚೌಕಟ್ಟಿನಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿಸಿದೆಯಷ್ಟೆ. ಆದರೆ, ಇದನ್ನೆ ನೆಪ ಮಾಡಿಕೊಂಡು ನೋಂದಾವಣೆಗೊಂಡಿರುವ ನಮ್ಮ ಸಂಘಟನೆಯನ್ನು ಟೀಕಿಸುವುದು ಸರಿಯಲ್ಲವೆಂದರು.

5.50  ಹೆಕ್ಟೇರ್ ಪ್ರದೇಶಕ್ಕಿಂತ ಕಡಿಮೆ ಭೂಮಿ ಹೊಂದಿರುವವರನ್ನು ರೈತರೆಂದು ಪರಿಗಣಿಸಲಾಗುತ್ತದೆ. 12.50  ಏಕರೆಗೆ ಮೇಲ್ಪಟ್ಟು ಜಮೀನು ಹೊಂದಿರುವವರಿಗೆ ಕಾರ್ಮಿಕ ಕಾಯ್ದೆ ಅನ್ವಯವಾಗುವುದಲ್ಲದೆ, ಆ ತೋಟಗಳ ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ ವೇತನ 321  ರೂ., ವಾಸದ ಲೈನ್ ಮನೆ, ಶುದ್ಧ ಕುಡಿಯುವ ನೀರು, ಆಸ್ಪತ್ರೆ ಸೌಲಭ್ಯ , ಬೋನಸ್, ಪಿಎಫ್, ಗರ್ಭಿಣಿಯರಿಗೆ 6 ತಿಂಗಳ ಹೆರಿಗೆ ಭತ್ಯೆ, ಮಕ್ಕಳಿಗೆ ಶಿಕ್ಷಣ ವೇತನ ಮತ್ತು ಬಸ್ ಪ್ರಯಾಣ ದರವನ್ನು ಮಾಲೀಕರೆ ಭರಿಸಬೇಕೆನ್ನುವ ನಿಯಮವಿದೆ. ಸರ್ಕಾರ ಘೋಷಿಸಿರುವ ವಾರ್ಷಿಕ 14 ರಜೆಗಳನ್ನು ಮತ್ತು ವರ್ಷಕ್ಕೆ 15 ದಿವಸ ರಜೆ ಸಹಿತ ಸಂಬಳ ನೀಡಬೇಕು, ಕಾರ್ಮಿಕರ ತಂದೆ ಅಥವಾ ತಾಯಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಬೇಕು. ಇವೆಲ್ಲವೂ ಕಾರ್ಮಿಕ ಕಾಯ್ದೆಯಡಿ ಬರುವ ಸೌಲಭ್ಯಗಳೇ ಆಗಿದ್ದು, ಇವುಗಳನ್ನು ಈಡೇರಿಸದಿದ್ದಲ್ಲಿ ಮಾತ್ರ ಸಂಘ ಹೋರಾಟವನ್ನು ರೂಪಿಸಲಿದೆಯೆಂದು ತಿಳಿಸಿದರು.
ಈ ಹೋರಾಟವು ಕಾನೂನಿನ ಚೌಕಟ್ಟಿನಡಿಯಲ್ಲೆ ಇರಲಿದ್ದು, ಈ ಬಗ್ಗೆ ಯಾವುದೇ ಸಂಶಯ ಬೇಡ. ಕೆಲವು ತೋಟಗಳಲ್ಲಿ ಆದಿವಾಸಿ ಕಾರ್ಮಿಕರಿಗೆ ಸಂಬಳವೇ ನೀಡದೆ, ಕೇವಲ ಮದ್ಯ ಮತ್ತು ಊಟವನ್ನು ನೀಡಿ ದೌರ್ಜನ್ಯ ಎಸಗಲಾಗುತ್ತಿದೆಯಂದು ಆರೋಪಿಸಿದ ಅವರುಗಳು, ಈ ರೀತಿ ತಪ್ಪೆಸಗುವವರ ವಿರುದ್ಧ ನೋಟಿಸ್ ನೀಡಲಾಗಿದೆಯೇ ಹೊರತು ರೈತ ವಿರೋಧಿ ಕ್ರಮ ಅನುಸರಿಸಿಲ್ಲವೆಂದು ಸ್ಪಷ್ಟಪಡಿಸಿದರು.
ಕಾರ್ಮಿಕ ಕಾನೂನು ಉಲ್ಲಂಘಿಸುವ ಮೂಲಕ ಮಾಲೀಕರು ತಪ್ಪು ಮಾರ್ಗ ಅನುಸರಿಸಿದರೆ ಒಂದು ವರ್ಷ ಸಜೆ ಮತ್ತು 1.50  ಲಕ್ಷ ರೂ. ದಂಡ ವಿಧಿಸುವ ಅವಕಾಶವಿದೆ. ಕಾರ್ಮಿಕರಿಗೆ ಕನಿಷ್ಟ ವೇತನ ನೀಡದೆ ನಿರಂತರವಾಗಿ ಸತಾಯಿಸುತ್ತಿರುವ ಪ್ರಕರಣ ಜಿಲ್ಲೆಯಲ್ಲಿದ್ದರು ಕಾರ್ಮಿಕ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಸಂಘಟನೆಯ ಧ್ವಜದಲ್ಲಿ ರೈತರನ್ನು ಗುರುತಿಸುವ ಕತ್ತಿ ಮತ್ತು ಕಾರ್ಮಿಕರನ್ನು ಪ್ರತಿನಿಧಿಸುವ ಸುತ್ತಿಗೆ ಗುರುತನ್ನು ಅಳವಡಿಸಲಾಗಿದೆ. ಇದು ರೈತರು ಹಾಗೂ ಕಾರ್ಮಿಕರು ಒಟ್ಟಾಗಿ ಹೋಗಬೇಕೆನ್ನುವ ಸಂದೇಶವನ್ನು ಸಾರುತ್ತಿದ್ದು, ರೈತರು ಕಾರ್ಮಿಕರನ್ನು ಶತ್ರುಗಳಂತೆ ಕಾಣುವುದನ್ನು ಬಿಡಬೇಕೆಂದು ಇ.ರ.ದುರ್ಗಾಪ್ರಸಾದ್ ಹಾಗೂ ಎ. ಮಹಾದೇವ್ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!