ಆರೋಗ್ಯಕ್ಕೆ ಅಡ್ಡಿಯಾಗದಿರಲಿ ಉಪ್ಪು
‘ಉಪ್ಪಿಗಿಂತ ರುಚಿ ಇಲ್ಲ’ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಉಪ್ಪು ಅತಿಯಾದರೇ ಆಪತ್ತು ಎಂಬುದು ಕೂಡ ತಿಳಿಯಬೇಕಾದ ವಿಷಯ.
ಆಧುನಿಕ ಜೀವನ ಶೈಲಿಯಿಂದ ಸೇವಿಸುವ ಆಹಾರಗಳಲ್ಲಿಯೂ ಬದಲಾವಣೆಯಾಗಿದೆ. ಆಹಾರದಲ್ಲಿನ ಉಪ್ಪಿನ ಅಂಶ ರುಚಿಯನ್ನು ಹೆಚ್ಚಿಸುತ್ತದೆ. ಆದರೆ, ಅಧಿಕ ಉಪ್ಪಿನ ಅಂಶ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಸೇವಿಸುವ ಆಹಾರದಲ್ಲಿ ಉಪ್ಪಿನ ಅಂಶವನ್ನು ಕಡಿಮೆ ಮಾಡಿ ಎನ್ನುತ್ತಾರೆ ತಜ್ಞರು.
1 ಗ್ರಾಂ ಉಪ್ಪಿನಲ್ಲಿ 400 ಎಂಜಿ ಸೋಡಿಯಂ ಅಂಶ ಇರುತ್ತದೆ. ದೇಹದ ಸುಸ್ಥಿತಿಗೆ 500 ಎಂಜಿಗಿಂತ ಸೋಡಿಯಂ ಬೇಕಿಲ್ಲ. ಪ್ರತಿದಿನ 5 ಗ್ರಾಂ ಉಪ್ಪು ಹೆಚ್ಚುವರಿಯಾಗಿ ಸೇರಿದರೆ, ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ.
ಸಂಸ್ಕರಿಸಿದ ಆಹಾರಗಳಲ್ಲಿ ಸೋಡಿಯಂ ಸಿಗುತ್ತದೆ. ನಿತ್ಯ ಸೇವಿಸುವ ಆಹಾರದ ಮೇಲೆ ನಿಯಂತ್ರಣ ಇಲ್ಲವಾದರೆ, ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ.
ಅಧಿಕ ರಕ್ತದೊತ್ತಡ ಮುಂದಿನ ಹಂತದಲ್ಲಿ ಹೃದಯ ಮೊದಲಾದ ಅಂಗಗಳ ಮೇಲೆ ಪರಿಣಾಮ ಬೀರಬಹುದಾದ ಸಾಧ್ಯತೆ ಇದೆ. ಅಧಿಕ ರಕ್ತದೊತ್ತಡದಿಂದ ಮೂತ್ರಪಿಂಡ ಸಮಸ್ಯೆ ಎದುರಾಗುತ್ತದೆ. ಪಾರ್ಶ್ವವಾಯು, ಹೃದ್ರೋಗ ಸಮಸ್ಯೆಗೂ ಕಾರಣವಾಗಬಹುದು.
ಫಾಸ್ಟ್ ಫುಡ್ ಗಳಲ್ಲಿ ಉಪ್ಪಿನ ಅಂಶ ಜಾಸ್ತಿ ಇರುವುದರಿಂದ ಕಡಿಮೆ ಸೇವಿಸಿ. ಬಾಕ್ಸ್ ಗಳಲ್ಲಿನ ಆಹಾರಗಳಲ್ಲಿ ಸೋಡಿಯಂ ಹೆಚ್ಚಾಗಿರುತ್ತದೆ. ಹಾಗಾಗಿ ಉಪ್ಪಿನ ಅಂಶವನ್ನು ಕಡಿಮೆ ಮಾಡಬೇಕಿದೆ. ರಕ್ತದೊತ್ತಡ ನಿಯಂತ್ರಿಸಲು ಕಡಿಮೆ ಉಪ್ಪು ಸೇವಿಸಿ. ಇದಕ್ಕಾಗಿ ಕೆಲವು ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.