ದರೋಡೆ ಸಂಚು ವಿಫಲ: ಐವರ ಬಂಧನ
ಬಂಟ್ವಾಳ: ಇಲ್ಲಿಗೆ ಸಮೀಪದ ಮಂಚಿ ಗ್ರಾಮದ ಮಂಚಿಕಟ್ಟೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ನುಸುಕಿನ ಜಾವ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಐವರು ಯುವಕರನ್ನು ಬಂಧಿಸುವ ಮೂಲಕ ದರೋಡೆ ಸಂಚನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನಿವಾಸಿ ಉಮ್ಮರ್ ಪಾರೂಕ್ ಯಾನೆ ಚೆನ್ನ ಫಾರೂಕ್( 26),ರಮೀಜ್ ಯಾನೆ ಮೊಹಮ್ಮದ್ ರಮೀಜ್ ( 22),ಮಂಗಿಲ ಪದವು ನಿವಾಸಿ ಮಹಮ್ಮದ್ ಅಬೂಬಕ್ಕರ್ (21), ಮಂಚಿ ಗ್ರಾಮದ ಅಬ್ದುಲ್ ಖಾದರ್ ( 40), ಪಾಣೆಮಂಗಳೂರು ಸಮೀಪದ ನಂದಾವರ ಕೋಟೆ ನಿವಾಸಿ ಖಲೀಲ್ ಯಾನೆ ಇಬ್ರಾಹಿಂ ಖಲೀಲ್ (24) ಬಂಧಿತ ಆರೋಪಿಗಳು. ಈ ಸಂದರ್ಭ ಸುರಿಬೈಲ್ ನ ಅಕ್ಬರ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 2 ಬೈಕ್, 3 ಕತ್ತಿ, ಹಾಗೂ 2 ಗ್ರಾಂ ನಷ್ಟು ಗಾಂಜಾ ಮೊಗ್ಗು ಪೊಲೀಸರು ವಶಪಡಿಸಿದ್ದಾರೆ. ಬಂಧಿತರ ಪೈಕಿ ಉಮ್ಮರ್ ಫಾರೂಕ್ ಯಾನೆ ಚೆನ್ನ ಫಾರೂಕ್ ಮತ್ತು ಖಲೀಲ್ ಯಾನೆ ಇಬ್ರಾಹಿಂ ಖಲೀಲ್ ಎಂಬವರ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೊಂಬಿ ಪ್ರಕರಣದಲ್ಲಿ ಆರೋಪಿಗಳಾಗಿರುತ್ತಾರೆಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್. ಐ. ಪ್ರಸನ್ನ ಮತ್ತವರ ಸಿಬ್ಬಂದಿಗಳು ಮಂಚಿಗ್ರಾಮದಲ್ಲಿ ರಾತ್ರಿಗಸ್ತಿನಲ್ಲಿದ್ದಾಗ ಬುಧವಾರ ನುಸುಕಿನ ಜಾವ ಸುಮಾರು 1.30 ರವೇಳೆಗೆ ಮಂಚಿಕಟ್ಟೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಐವರು ಯುವಕರ ತಂಡವನ್ನು ಗಮನಿಸಿ,ವಿಚಾರಿಸಿದಾಗ ಅಸ್ಪಷ್ಟ ಉತ್ತರ ನೀಡಿದ್ದು,ಇದರಿಂದ ಅನುಮಾನಗೊಂಡ ಪೊಲೀಸರು ಈ ಐವರನ್ನು ವಶಕ್ಕೆ ಪಡೆದು ತೀವ್ರ ತನಿಖೆಗೆ ಗುರಿಪಡಿಸಿದಾಗ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವ ಲಾರಿ ಮತ್ತು ಇತರೆ ವಾಹನಗಳನ್ನು ತಡೆದು ಚಾಲಕರನ್ನು ದೋಚುವ ಸಂಚು ರೂಪಿಸಿ ಕಾಯುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಈ ಐವರನ್ನು ಬಂಧಿಸಲಾಯಿತು.ಬಳಿಕ ಆರೋಪಿಗಳ ಬೈಕನ್ನು ಪರಿಶೀಲಿಸಿದಾಗ ವಿವಿಧ ಆಕಾರದ ಮೂರು ಕತ್ತಿಗಳು ಮತ್ತು ಗಾಂಜಾ ಮೊಗ್ಗುವಿನ ಪೊಟ್ಟಣವೊಂದು ಪತ್ತೆಯಾಗಿದ್ದು,ಇದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.