ಎನ್’ಡಿಎ ಕೈಬಿಟ್ಟು ಕಾಂಗ್ರೆಸ್-ಎನ್’ಸಿಪಿ ಜೊತೆ ಸರ್ಕಾರ ರಚನೆಗೆ ಸಿದ್ಧ: ಶಿವಸೇನೆ

ಮುಂಬೈ: ಮಹಾರಾಷ್ಟ್ರ ಸೋಮವಾರ ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಇಷ್ಟು ದಿನ ಬಿಜೆಪಿ ಜೊತೆಗೆ ಇರಿಸು-ಮುನಿಸು ಪ್ರದರ್ಶಿಸುತ್ತಿದ್ದ ಶಿವಸೇನೆ ಇದೀಗ ಎನ್’ಡಿಎಗೆ ಕೈಕೊಟ್ಟು, ಕಾಂಗ್ರೆಸ್-ಎನ್’ಸಿಪಿ ಪಕ್ಷಗಳ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸಿದ್ಧ ಎಂದು ಹೇಳಿದೆ. 

ಈ ಕುರಿತು ಮಾತನಾಡಿರುವ ಶಿವಸೇನೆ ಸಂಸದ ಸಂಜಯ್ ರಾವತ್ ಅವರು, ಬಿಜೆಪಿ ನೇತೃತ್ವದ ಎನ್’ಡಿಎ ಜೊತೆಗಿನ ಮೈತ್ರಿ ಮುರಿಯಲು ಶಿವಸೇನೆ ನಿರ್ಧರಿಸಿದ್ದು, ಕಾಂಗ್ರೆಸ್ ಹಾಗೂ ಎನ್’ಸಿಪಿ ಬೆಂಬಲದೊಂದಿಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು ತೀರ್ಮಾನಿಸಿದ್ದೇವೆಂದು ಹೇಳಿದ್ದಾರೆ. 

ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆಯವರು ಸಂಪುಟದಲ್ಲಿ ಶಿವಸೇನೆಯಿಂದ ಏಕೈಕ ಕೇಂದ್ರ ಸಚಿವರಾಗಿದ್ದ ಅರವಿಂದ ಸಾವಂತ್ ಅವರನ್ನು ಹುದ್ದೆಯಿಂದ ದೂರ ಇಡುವಂತೆ ನಿರ್ದೇಶಿಸಿದ್ದರು. ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಜೆಪಿ ನಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದು, ನಮ್ಮನ್ನು ಅಧಿಕಾರದಿಂದ ಸಂಪೂರ್ಣವಾಗಿ ದೂರ ಇಡಲು ನಿರ್ಧರಿಸಿದಂತಿದೆ. ಹೀಗಿರುವಾಗ ಎನ್’ಡಿಎ ಜೊತೆಗೆ ಮುಂದುವರೆಯುವುದಾದರೂ ಹೇಗೆ?  ಎಂದು ಪ್ರಶ್ನಿಸಿರುವ ಅವರು, ಇದೀಗ ನಾವು ಮೊದಲ ಹೆಜ್ಜೆಯನ್ನು ಇಟ್ಟಿದ್ದೇವೆ. ಎಲ್ಲಾ ಆಯಾಮಗಳ ಬಗ್ಗೆ ಚಿಂದನೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿರುವುದು ಇನ್ನು ಅವರಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ. 

ಎನ್’ಸಿಪಿ ನಾಯಕ ಪ್ರಫುಲ್ ಪಟೇಲ್ ಮಾತನಾಡಿ, ನಮಗೆ ಬಹುಮತವಿಲ್ಲ. ಬಹುಮತ ಇರುವವರು ಸರ್ಕಾರ ರಚಿಸಲು. ನಮ್ಮ ನಿಲುವವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಸರ್ಕಾರ ರಚಿಸುವುದು ಸುಲಭದ ವಿಚಾರವಲ್ಲ. ಸರ್ಕಾರ ರಚನೆ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ವರೆಗೂ ನಾವು ಯಾರೊಂದಿಗೂ ಮೈತ್ರಿಯಾಗಲೀ, ಒಪ್ಪಂದಗಳಾಗಲಿ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *

error: Content is protected !!