ಕೊಡಗಿನಲ್ಲಿ ರವಿ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ

ಮಡಿಕೇರಿ ಜೂ. ೧೨ : ಸುಂಟಿಕೊಪ್ಪ ಸಮೀಪದ ನಾಕೂರು ಬಳಿಯ ಹೋಂಸ್ಟೇಯೊಂದರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ರವಿ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ನೆರವೇರಿತು.

ರವಿಚಂದ್ರನ್, ಶ್ರೀನಿವಾಸ್ ಪ್ರಭು, ಮೋನಿಷಾ, ಯತಿರಾಜ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕೊಡಗಿನ ವಿವಿದೆಡೆ ನಡೆಯಲಿದೆ.
ಸುದ್ದಿಗಾರರೊಂದಿಗೆ ನಟ ರವಿಚಂದ್ರನ್ ಮಾತನಾಡಿ, ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಹೊಸಬರ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತಸ ತರಿಸಿದೆ. ಕೊಡಗಿನಲ್ಲಿ ಈ ಹಿಂದೆ ದೃಶ್ಯ ಚಿತ್ರದ ಚಿತ್ರೀಕರಣ ಮಾಡಿದ್ದು ನೆನಪಾಗುತ್ತಿದೆ. ಮಳೆ, ಪ್ರಕೃತಿಯಂದರೆ ನನಗಿಷ್ಟ. ಸಿನಿಮಾದ ಕಥೆ ಕೂಡ ಇದನ್ನೇ ಬಯಸಿದೆ. ಈ ನಿಟ್ಟಿನಲ್ಲಿ ಇಲ್ಲೇ ಚಿತ್ರೀಕರಣ ಮಾಡುತ್ತಿದ್ದೇವೆ. ಚಿತ್ರದ ಚಿತ್ರೀಕರಣ ಶೇ. ೯೦ರಷ್ಟು ಭಾಗ ಕೊಡಗಿನಲ್ಲಿರಲಿದೆ. ಇದು ರಿಮೇಕ್ ಸಿನಿಮಾವಾಗಿದ್ದು ಕನ್ನಡ ಸೊಗಡಿರಲಿದೆ ಎಂದರು.

ನಿರ್ದೇಶಕ ಅಜಿತ್ ಸರ್ಕಾರ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ ನಾನೇ ಬಂಡವಾಳ ಕೂಡ ಹೂಡಿದ್ದೇನೆ. ವಿಭಿನ್ನ ಕಥಾ ಹಂದರ ಹೊಂದಿದ್ದು ಸಸ್ಪೆನ್ಸ್ ಕಥೆಯಾಗಿದೆ. ಕಥೆಯ ಸುಳಿವನ್ನು ಊಹಿಸಲು ಅಸಾಧ್ಯ. ಅಷ್ಟೊಂದು ತಿರುವು ಚಿತ್ರಕಥೆಯಲ್ಲಿದ್ದು ಪ್ರೇಕ್ಷಕನನ್ನು ಸೆಳೆಯಲಿದೆ. ಜತೆಗೆ ಸಮಾಜಕ್ಕೆ ಸಂದೇಶ ಕೂಡ ಇದೆ ಎಂದು ಮಾಹಿತಿ ನೀಡಿದರು.

ಛಾಯಗ್ರಾಹಕ ಪಿಆರ್‌ಕೆ ದಾಸ್ ಮಾತನಾಡಿ, ಮಳೆಯಲ್ಲಿ ಚಿತ್ರೀಕರಣ ಮಾಡುವುದು ಸಹಾಸದ ಜತೆಗೆ ಕ್ರಿಯಾಶೀಲಾ ಕೆಲಸ. ಕನ್ನಡ ಹಲವು ಸಿನಿಮಾದ ಕೆಲಸವನ್ನು ನಾನು ಮಳೆಯಲ್ಲಿ ಮಾಡಿದ್ದು ಇದು ಹೊಸದಲ್ಲ. ಸಿನಿಮಾ ಕಥೆ ಸುಂದರವಾಗಿದ್ದು ಸಿನಿಮಾ ಅಚ್ಚುಕಟ್ಟಾಗಿ ಮೂಡಿಬರಲಿದೆ ಎಂದರು.

ಚಿತ್ರದಲ್ಲಿ ೫ ಹಾಡುಗಳಿದ್ದು, ಯೋಗರಾಜ್ ಭಟ್ ಸೇರಿದಂತೆ ಇನ್ನಿತರರು ಸಾಹಿತ್ಯ ಬರೆಯಲಿದ್ದಾರೆ. ಸಂಗೀತ ನಿರ್ದೇಶನ ಇನ್ನೂ ಅಂತಿಮಗೊಂಡಿಲ್ಲ. ದೃಶ್ಯ ಚಿತ್ರದಂತೆ ಇದು ವಿಭಿನ್ನವಾಗಲಿದ್ದು ರವಿಚಂದ್ರನ್ ವೃತ್ತಿ ಬದುಕಿನ ಉತ್ತಮ ಚಿತ್ರವಾಗಿರಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!