ಡಿಕೆಶಿ ಬಂಧನ: ರಾಮನಗರದಲ್ಲಿ ಬಸ್‌ಗಳಿಗೆ ಬೆಂಕಿ, ಶಾಲೆ–ಕಾಲೇಜುಗಳಿಗೆ ರಜೆ
ರಾಮನಗರ: ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ ಬುಧವಾರ ಮುಂಜಾನೆಯಿಂದ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ಆರಂಭವಾಗಿವೆ. ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತಿದ್ದು, ಬೆಳಗ್ಗೆ ಒಂಭತ್ತರ ನಂತರ ಬೆಂಗಳೂರು- ಮೈಸೂರು ಹೆದ್ದಾರಿ ಬಂದ್ ಆಗುವ ಸಾಧ್ಯತೆ ಇದೆ.
ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ, ಶಾಲೆ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಅರ್ಚನಾ ಆದೇಶಿಸಿದ್ದಾರೆ.
ಜಿಲ್ಲಾ ಕೇಂದ್ರವೂ ಸೇರಿದಂತೆ ಹಲವು ತಾಲ್ಲೂಕು ಕೇಂದ್ರಗಳಲ್ಲಿ ಅಘೋಷಿತ ಬಂದ್ ವಾತಾವರಣ ಇದೆ. ಕನಕಪುರದಲ್ಲಿ ಬೆಳಗ್ಗೆಯಿಂದಲೇ ಪ್ರತಿಭಟನೆಗಳು ಆರಂಭವಾಗಿವೆ. ತಡರಾತ್ರಿ ಕನಕಪುರ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ಬಸ್‌ಗೆ ಕಲ್ಲುತೂರಿ ಬೆಂಕಿ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕನಕಪುರ ಹಾಗೂ ರಾಮನಗರದ ಪ್ರಮುಖ ವೃತ್ತಗಳಲ್ಲಿ ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ರಾಮನಗರ ಎಸ್‌ಪಿ ಅನೂಪ್ ಶೆಟ್ಟಿ, ಚಿಕ್ಕಬಳ್ಳಾಪುರ ಎಸ್‌ಪಿ ಸಂತೋಷ್ ಬಾಬು ನೇತೃತ್ವದಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಕಲ್ಪಿಸಿದ್ದಾರೆ.
ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ ಡಿಕೆಶಿ ಬೆಂಬಲಿಗರು ರಸ್ತೆ ಮಧ್ಯೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಡಿಕೆಶಿ ಅವರ ಸ್ವ ಗ್ರಾಮವಾದ ದೊಡ್ಡ ಆಲಹಳ್ಳಿ ಸಮೀಪದ ಚುಂಚಿ ಕಾಲೊನಿ ಬಳಿ ದುಷ್ಕರ್ಮಿಗಳು ಮಂಗಳವಾರ ಮಧ್ಯರಾತ್ರಿ ಬಸ್ ಗೆ ಬೆಂಕಿ ಇಟ್ಟಿದ್ದು, ವಾಹನ ಸುಟ್ಟು ಕರಕಲಾಗಿದೆ.