ರಾಮಲಿಂಗ ರೆಡ್ಡಿ ಮೂಲಕ ಸಂಧಾನ ಮತ್ತೆ ವಿಫಲಗೊಂಡ ಕುಮಾರ ಪ್ರಯತ್ನ

ಬೆಂಗಳೂರು: ವಿಶ್ವಾತ ಮತಯಾಚನೆ ಮಾಡಲು 2 ದಿನಗಳ ಹೆಚ್ಚುವರಿ ಅವಧಿ ಸಿಕ್ಕ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರದ ನಾಯಕರು ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನ ಮುಂದುವರಿಸಿದ್ದಾರೆ. ಇದೇ ವೇಳೆ ರಾಮಲಿಂಗಾ ರೆಡ್ಡಿ ಅವರ ಮೂಲಕ ಬೆಂಗಳೂರು ಶಾಸಕರ ಮನವೊಲಿಕೆ ಮಾಡುವ ಕಾರ್ಯವೂ ನಡೆದಿದೆ. ಆದರೆ ಈ ಯತ್ನ ವಿಫಲ ಆಗಿದೆ ಎನ್ನಲಾಗಿದೆ.
ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರು ಖುದ್ದು ಅವರೇ ರಾಮಲಿಂಗಾ ರೆಡ್ಡಿ ಅವರ ಮೂಲಕ ಪ್ರಯತ್ನ ನಡೆಸಿದ್ದಾರೆ. ಆದರೆ ರಾಮಲಿಂಗಾ ರೆಡ್ಡಿ ಅವರ ಫೋನ್ ಕರೆಯನ್ನು ಸ್ವೀಕಾರ ಮಾಡದ ಅತೃಪ್ತ ಶಾಸಕರು ಅವರ ಮನವೊಲಿಕೆಗೆ ಅವಕಾಶವನ್ನೇ ನೀಡಿಲ್ಲ ಎನ್ನಲಾಗಿದೆ.
ಈಗಾಗಲೇ ಅತೃಪ್ತ ಶಾಸಕರ ಮನವೊಲಿಕೆಗೆ ಕೊನೆಯ ಕ್ಷಣದ ಪ್ರಯತ್ನ ಕಾಂಗ್ರೆಸ್‍ನಿಂದಲೂ ನಡೆಯುತ್ತಿದೆ. ಆದರೆ ಈ ಪ್ರಯತ್ನಕ್ಕೆ ಇದುವರೆಗೂ ಯಾವುದೇ ಫಲ ಸಿಕ್ಕಿಲ್ಲ ಎಂಬ ಮಾಹಿತಿ ಲಭಿಸಿದೆ. ಬೆಂಗಳೂರು ಶಾಸಕರಲ್ಲಿ ಪ್ರಮುಖವಾಗಿ ಮುನಿರತ್ನ, ಭೈರತಿ ಬಸವರಾಜ್, ಎಸ್‍ಟಿ ಸೋಮಶೇಖರ್ ಹಾಗೂ ಜೆಡಿಎಸ್ ಪಕ್ಷದ ಗೋಪಾಲಯ್ಯ ಅವರನ್ನು ಏನಾದ್ರೂ ಮಾಡಿ ಸೆಳೆಯುವ ಪ್ರಯತ್ನ ನಡೆದಿದೆ. ಸದನದಲ್ಲಿ ಕೆಲ ಶಾಸಕರ ವಿರುದ್ಧ ಆರೋಪ ಮಾಡಿದ್ದರು ಕೂಡ ಮನವೊಲಿಸುವ ಕಾರ್ಯವೂ ನಡೆದಿದೆ. ಆದರೆ ಈ ಮನವೊಲಿಕೆ ಕಾರ್ಯದಿಂದ ಇಬ್ಬರು ಜೆಡಿಎಸ್ ಶಾಸಕರನ್ನು ಹೊರಗಿಟ್ಟಿದ್ದಾರೆ ಎನ್ನಲಾಗಿದೆ.
ಮೊದಲಿನಿಂದಲೂ ಐವರು ಶಾಸಕರು ಕೂಡ ರಾಮಲಿಂಗಾರೆಡ್ಡಿ ಅವರೇ ನಮ್ಮ ನಾಯಕರು ಎಂದು ಹೇಳಿ ರಾಜೀನಾಮೆ ನೀಡಿದ್ದರು. ಅಲ್ಲದೇ ಅವರ ನಿರ್ಧಾರವೇ ತಮ್ಮ ಅಂತಿಮ ಎಂದಿದ್ದರು. ಆದರೆ ಏಕಾಏಕಿ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದ ಹಿನ್ನೆಲೆಯಲ್ಲಿ ಅವರನ್ನು ವಾಪಸ್ ಕರೆತರುವ ರಣತಂತ್ರಗಳು ನಡೆದಿತ್ತು. ಇಂದು ರಾಮಲಿಂಗಾ ರೆಡ್ಡಿ ಅವರು ಎಚ್‍ಡಿಡಿ ನಿವಾಸಕ್ಕೂ ಭೇಟಿ ನೀಡಿದ್ರು. ಈ ಸಂದರ್ಭದಲ್ಲಿ 45 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು. ಆದರೆ ಈ ಯಾವುದೇ ಸಭೆಗಳು ಅತೃಪ್ತರನ್ನು ವಾಪಸ್ ಕರೆತರುವ ಲೆಕ್ಕಾಚಾರಗಳು ಫಲ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

error: Content is protected !!