“ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ”-ಅಲೆವೂರು ಸಂತೆಯಲ್ಲಿ ಚಾಲನೆ.
ಉಡುಪಿ,ಸೆ.20; ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಉಡುಪಿ, ಇವರು ಜಂಟಿಯಾಗಿ ಆಯೋಜಿಸಿದ “ಪ್ಲಾಸ್ಟಿಕ್ ತ್ಯಜಿಸಿ- ಪರಿಸರ ಉಳಿಸಿ” ಅಭಿಯಾನ, ಅಲೆವೂರು ಜೋಡುರಸ್ತೆ, ಇಲ್ಲಿ ನಡೆಯುವ ವಾರದ ಸಂತೆಯಲ್ಲಿ ಚಾಲನೆ ನೀಡಲಾಯಿತು.
ಡಂಗುರ ಬಾರಿಸಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವಂತೆ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ಮಾರಕ ತೊಂದರೆಗಳ ಬಗ್ಗೆ, ಸಂತೆಯಲ್ಲಿ ತರಕಾರಿ ಖರಿಧಿಗೆ ಬಂದ ಗ್ರಾಹಕರಿಗೆ ಮತ್ತು ಮಾರಟಗಾರರಿಗೆ ಮೌಖಿಕವಾಗಿ ವಿವರಿಸಿ ಅರಿವು ಮೂಡಿಸಲಾಯಿತು. ಪ್ಲಾಸ್ಟಿಕ್ ಚೀಲದಲ್ಲಿ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಗ್ರಾಹಕರಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ವಾಪಸು ಪಡೆದು, ಬಹುಕಾಲ ಬಳಕೆಗೆ ಬರುವ ಪರಿಸರಸ್ನೇಹಿ ಬಟ್ಟೆಚೀಲವನ್ನು ಗ್ರಾಹಕರಿಗೆ ಉಚಿತವಾಗಿ ಜಂಟಿ ಟ್ರಸ್ಟಿನ ಕಾರ್ಯಕರ್ತರು ನೀಡಿದರು. ಸಂತೆಯಲ್ಲಿ ನಡೆದ ಅಭಿಯಾನದ ಬಗ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ‘ಪ್ಲಾಸ್ಟಿಕ್ ತ್ಯಜಿಸಿ.. ಪರಿಸರ ಉಳಿಸಿ’ ಅಭಿಯಾನ ಮುಂದುವರಿಯಲಿದೆ, ಪ್ರಥಮ ಹಂತದ ಅಭಿಯಾನದಲ್ಲಿ ಮನೆಗೆ ಒಂದರಂತೆ, ನೂರು ಗ್ರಾಹಕರಿಗೆ ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸಲಾಗಿದೆ. ಮಾರುಕಟ್ಟೆಯಲ್ಲಿ ಖರಿಧಿ ಪ್ರಕ್ರಿಯೆ ನಡೆಸಲು ಹೋಗುವಾಗ ಉಪಯೋಗಿಸುವಂತೆ ಹೇಳಿದ್ದೆವೆ. ಎಂದು ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಹೇಳಿದರು.
ಅಭಿಯಾನ ಕಾರ್ಯಕ್ರಮದಲ್ಲಿ ಪಂಚರತ್ನ ಟ್ರಸ್ಟಿನ ಉಪಾಧ್ಯಕ್ಷ ತಾರಾನಾಥ್ ಮೇಸ್ತ ಶಿರೂರು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು, ಜೊತೆ ಕಾರ್ಯದರ್ಶಿ ಯತೀಶ್ ತಿಂಗಳಾಯ, ನಾಗರಿಕ ಸಮಿತಿ ಸದಸ್ಯರಾದ ರಾಜೇಶ್ ದೇವಾಡಿಗ ಕಾಪು, ಹರೀಶ್ ದೇವಾಡಿಗ ಕುಕ್ಕಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.