ನಾಳೆ 1:30ರೊಳಗೆ ಬಹುಮತ ಸಾಬೀತುಪಡಿಸಿ: ರಾಜ್ಯಪಾಲರಿಂದ ಖಡಕ್ ಸೂಚನೆ
ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸುವ ಬಗ್ಗೆ ಸದನದಲ್ಲಿ ಚರ್ಚೆ ಆರಂಭಿಸಿದ್ದು, ಈ ನಡುವೆಯೇ ರಾಜ್ಯಪಾಲರು ಶುಕ್ರವಾರ ಮಧ್ಯಾಹ್ನ 1.30ರ ವೇಳೆಗೆ ವಿಶ್ವಾಸ ಮತ ಸಾಬೀತು ಪಡಿಸುವಂತೆ ಆದೇಶ ನೀಡಿದ್ದಾರೆ.
ರಾಜ್ಯಪಾಲ ವಾಜೂಬಾಯ್ ವಾಲಾ ಅವರು 175 (2) ವಿಧಿಯ ಅನ್ವಯ ರಾಜ್ಯಪಾಲರು ಆದೇಶವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸುವುದು ಅನಿವಾರ್ಯವಾಗಿದೆ. ಇಂದು ಸದನದ ಸಮಯದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಂದೇಶ ನೀಡಿದ್ದ ರಾಜ್ಯಪಾಲರು ಇಂದೇ ಬಹುಮತ ಸಾಬೀತು ಪರಿಶೀಲನೆ ನಡೆಸಿ ಎಂದು ತಿಳಿಸಿದ್ದರು. ಆದರೆ ಇದನ್ನು ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದ ಸ್ಪೀಕರ್ ಇದನ್ನು ಕಾನೂನಿನ ತಜ್ಞರ ಮೊರೆ ಹೋಗಿದ್ದರು.
ಸ್ಪೀಕರ್ ಅವರ ನಡೆಯ ಬೆನ್ನಲ್ಲೇ ರಾಜ್ಯಪಾಲರು ಖಡಕ್ ಆದೇಶ ನೀಡಿದ್ದು, ಒಂದೊಮ್ಮೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿದರೆ ರಾಜ್ಯಪಾಲರು ರಾಷ್ಟ್ರಪತಿಗಳ ಆಡಳಿತ ಹೇರಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬಹುದು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶ ಮಹತ್ವವನ್ನು ಪಡೆದುಕೊಂಡಿದೆ.
ಸ್ಪೀಕರ್ ಅವರ ವಿಳಂಬ ದೋರಣೆ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ಆದೇಶ ನೀಡಿದ್ದಾರೆ. ಮುಂದಿನ 17 ಗಂಟೆಗಳ ಅವಧಿಯಲ್ಲಿ ಮೈತ್ರಿ ಸರ್ಕಾರ ಭವಿಷ್ಯ ನಿರ್ಧಾರ ಆಗುವುದು ಬಹುತೇಕ ಖಚಿತ ಎಂಬ ಅಭಿಪ್ರಾಯ ಕಾನೂನು ತಜ್ಞರ ವಲಯದಿಂದ ಕೇಳಿ ಬಂದಿದೆ. ಇತ್ತ ಮೈತ್ರಿ ಸರ್ಕಾರ ರಾಜ್ಯಪಾಲರ ಆದೇಶದ ವಿರುದ್ಧ ನ್ಯಾಯಾಲಯಕ್ಕೂ ಮೊರೆ ಹೋಗುವ ಸಾಧ್ಯತೆ ಇದೆ.