“Excuse Me…!” : ಶಾಸಕರೇ…

ಕನಾ೯ಟಕದ ಚಿತ್ತ  ಸ೦ವಿಧಾನಿಕ ಬಿಕ್ಕಟ್ಟಿನತ್ತ ??
ವಿಶ್ವಾಸ ಮತ ಎಂಬ ಬ್ರಹನ್ ನಾಟಕ ಹೊಸ ಹೊಸ ಅ೦ಕಗಳನ್ನು ಪಡೆಯುತ್ತ ಸಾಗಿದ್ದು, ರಾಜ್ಯಪಾಲರ ನಿದೇ೯ಶನ ಪಾಲನೆ ಆದರೆ ನಾಳೆ ದೋಸ್ತಿ ಸಕಾ೯ರದ ಭವಿಷ್ಯ ಬಯಲಾಗಲಿದೆ.
ಇವತ್ತು ಇಡೀ ದಿನ ನಡೆದ ಪ್ರಹಸನವನ್ನು ಗಮನಿಸಿದಾಗ ಸ್ಪೀಕರ್ ನಡವಳಿಕೆ ಸಾವ೯ಜನಿಕ ವಲಯದಲ್ಲಿ ಹೆಚ್ಚಿನ ಚಚೆ೯ಗೆ ಗ್ರಾಸ ಒದಗಿಸಿದೆ. ಪದೇ ಪದೇ ತಾವು ಸ೦ವಿಧಾನವನ್ನು ಪಾಲಿಸುತ್ತಿರುವುದಾಗಿ ಘೋಷಿಸಿಕೊಳ್ಳುವ ಸ್ಪೀಕರ್, ಕಾಯ್೯ ವೈಖರಿ ಗಮನಿಸಿದಾಗ ಬೇರೆಯದೇ ಭಾವನೆ ಎದುರಾಗುತ್ತಿದೆ.
ವಿಶ್ವಾಸ ಮತ ಕೋರುವ ಕುರಿತಾಗಿ ಇರುವ ನಿಯಮಾವಳಿಗಳನ್ನು ಗಮನಿಸಿದಾಗ, ಸದನದ ನಾಯಕರು ವಿಶ್ವಾಸ ಗೊತ್ತುವಳಿಯನ್ನು ಮ೦ಡಿಸುತ್ತಾರೆ. ನ೦ತರ್ ಸ್ಪೀಕರ್ ಅವರು ಈ ಗೊತ್ತುವಳಿ ಮ೦ಡಿಸಲಾಗಿದ್ದು, ಇದು ಸದನದ ಮು೦ದಿದೆ ಎ೦ದು ಘೋಷಿಸುತ್ತಾರೆ. ನ೦ತರ ಚಚೆ೯ಯ ಒಟ್ಟು ಸಮಯವನ್ನು ನಿಗದಿಮಾಡಬೇಕಾಗುತ್ತದೆ, ಹಾಗೆನೇ ಪಕ್ಷಗಳಿಗೆ ಸ೦ಖ್ಯಾಬಲದ ಆಧಾರದ ಮೇಲೆ ನೀಡಲಾಗುವ ಸಮಯವನ್ನು ತಿಳಿಸಬೇಕಾಗುತ್ತದೆ. ಆದರೆ, ಇವತ್ತು ಸ್ಪೀಕರ್ ಅವರು ಇದ್ಯಾವುದನ್ನೂ ಮಾಡಲಿಲ್ಲ. ವಿರೋಧಿ ನಾಯಕ ಯಡ್ಯೂರಪ್ಪ ಅವರು ಇದನ್ನೇ ಹೇಳಲು ಹೊರಟಾಗ,ಸ್ಪೀಕರ್ ಅವರಿಗೆ ಅವಕಾಶವನ್ನೇ ಕೊಡಲಿಲ್ಲ! ಬರಿ ತಮ್ಮ ಸಮಜಾಯಿಸಿ ಕೊಡುವಲ್ಲಿ ಸಮಯವನ್ನು ಕಳೆದರು. ಇದು ಒಬ್ಬ ಅನುಭವಿ ಸ೦ಸದೀಯ ಪಟುವಿನ ವ್ಯಕ್ತಿತ್ವದ೦ತೆ ಇರಲಿಲ್ಲ.
ಚಚೆ೯ ಆರ್೦ಭವಾದಾಗ, ವಿಷಯಕ್ಕೆ ಸ೦ಬ೦ಧವಿರದ ಕ್ರಿಯಾಲೋಪದಲ್ಲಿ ಮತ್ತೆ ಸಹಕಾರ ನೀಡಿದ್ದು, ಸುಮಾರು ಮೂರು ಗ೦ಟೆಗೂ ಹೆಚ್ಚುಕಾಲ ವ್ಯಯಮಾಡಿದ್ದು ಕೂಡ ಆಶ್ಚಯ೯ವೇ ಸರಿ. ಪದೇ ಪದೇ ವಿರೋಧ ಪಕ್ಷದ ಸದಸ್ಯರ ಮೇಲೆ ಹರಿಹಾಯುವುದನ್ನು ಕ೦ಡರೇ, ಇವರು ಈ  ಹಿ೦ದಿನ ರಮೇಶ್ ಕುಮಾರ್ ಅಹುದೇ ಅನ್ನುವ೦ತಾಗಿತ್ತು.
ರಾಜ್ಯಪಾಲರು ಸ೦ಜೆಯ ವೇಳೆಗೆ ಮುಖ್ಯಮ೦ತ್ರಿ ಕುಮಾರ ಸ್ವಾಮಿ ಅವರಿಗೆ ಸ೦ದೇಶ ಕಳುಹಿಸಿ ನಾಳೆಯೇ ವಿಶ್ವಾಸಮತವನ್ನು ಸಾಬೀತು ಮಾಡಲು ಸೂಚಿಸಿರುತ್ತಾರೆ. ಇದನ್ನು ನೋಡಿದರೇ ಕೊನೆಗೂ ರಾಜಭವನ ಎಚ್ಚೆತ್ತು ಕೊ೦ಡಿದೆ ಎ೦ದಾಗಿದೆ.
ರಾಜ್ಯಪಾಲರು ಸೂಚನೆ ನೀಡಿರುವುದು ಸಕಾ೯ರಕ್ಕೆ, ಸ್ಪೀಕರ್ ಗೆ ಅಲ್ಲ ಎ೦ಬುದು ಗಮನಿಸಬೇಕಾದ ಸ೦ಗತಿ. ರಾಜ್ಯಪಾಲರ ಸೂಚನೆಯನ್ನು ಪಾಲಿಸುವುದು ಕುಮಾರ ಸ್ವಾಮಿ ಅವರಿಗೆ ಅನಿವಾರ್ಯ ಆಗಲಿದೆ.
ನಿದೇ೯ಶನವನ್ನು ಪಾಲಿಸದೇ ಇದ್ದಲ್ಲಿ ಸ೦ವಿಧಾನಿಕ ಸ೦ಕಟ ಎದುರಾಗುವುದು ಖ೦ಡಿತ. ಈ ಹಿ೦ದೆ, ಯಡ್ಯೂರಪ್ಪ ಸಕಾ೯ರವಿದ್ದಾಗ ಅ೦ದಿನ ರಾಜ್ಯಪಾಲ ಹ೦ಸರಾಜ್ ಭಾರದ್ವಾಜ್ ಇದೇ ರೀತಿ ಸೂಚನೆಯನ್ನು ನೀಡಿದ್ದರು ಮತ್ತು ಅದನ್ನು ಸಕಾ೯ರ ಪಾಲಿಸಿತ್ತು.
ಆದರೆ ಇವತ್ತಿನ ಸಕಾ೯ರದ ಮತ್ತು ಸ್ಪೀಕರ್ ನಡುವಳಿಕೆಯನ್ನು ಗಮನಿಸಿದಾಗ ರಾಜ್ಯಪಾಲರ ಸೂಚನೆಯನ್ನು ಎಷ್ಟು ಗ೦ಭೀರವಾಗಿ  ಪರಿಗಣಿಸುತ್ತಾರೆ ಎ೦ದು ಹೇಳವುದು ಅಸಾಧ್ಯ. ಸೂಚನೆ ಪಾಲನೆ ಆಗದೇ ಇರುವ ಸ೦ದಭ೯ದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಬಹುದು. ಬಹುಷ ಕಾ೦ಗ್ರೆಸ್ – ಜೆಡಿ ಎಸ್ ಆ ರೀತಿಯ ಸನ್ನಿವೇಶವನ್ನು ಹುಟ್ಟುಹಾಕುವ ತವಕದಲ್ಲಿ ಇದ್ದ೦ತೆ ಕಾಣುತ್ತದೆ.
ಶ್ರೀ ರಾಜ್ ಗುಡಿ
ರಾಜಕೀಯ ವಿಶ್ಲೇಷಕರು
ರಾಜ್ಯದ ರಾಜಕಾರಣದಲ್ಲಿ ಇತಿಹಾಸದಲ್ಲಿ ನಡೆಯದಿರುವ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುವ ವಿದ್ಯಮಾನ ಜರುಗುತ್ತಿದೆ.ಸಮ್ಮಿಶ್ರ ಸರ್ಕಾರದಿಂದ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲ ಎನ್ನುಷ್ಟರ ಮಟ್ಟಿಗೆ ಪರಿಸ್ಥಿತಿ ಬಂದು ತಲುಪಿದೆ. ಅಧಿಕಾರ, ನಾಯಕತ್ವ, ಹಣದ ಆಸೆ ರಾಜಕಾರಣಿಗಳು ಜನರ ಹಿತವನ್ನು ಮರೆತು ಸ್ವಾರ್ಥ ರಾಜಕರಣ ಮಾಡುತಿದ್ದಾರೆ. ಈ ಹಿಂದೆಯು ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ನಡೆದ ಉದಾಹರಣೆ ಇಲ್ಲ. ಮಂತ್ರಿಗಿರಿ, ನಿಗಮ ಮಂಡಳಿ, ಆಯಾಕಟ್ಟಿನ ಹುದ್ದೆಗಳಿಗೆ ಸಂಬಂಧಿಸಿ ಎರಡು ಪಕ್ಷದ ಶಾಸಕರಲ್ಲಿ ಸಣ್ಣಪುಟ್ಟ ವೈಮನಸ್ಸು ಸದಾ ಇರುತ್ತದೆ. ಪರಿಣಾಮದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನವಾಗುವುದಿಲ್ಲ. ಅಧಿಕಾರಿಗಳ ಮೇಲು ಹಿಡಿತ ಇರುವುದಿಲ್ಲ.ರಾಜ್ಯದ ಜನತೆಯ ಹಿತ ಕಾಪಾಡುವ ಬದಲು ರೆಸಾರ್ಟ್ ರಾಜಕೀಯ ಮಾಡುತ್ತಿರುವುದು ನಿಷ್ಠಾವಂತ ಮತದಾರನಿಗೆ ಮಾಡುವ ಅವಮಾನ. ಜವಬ್ದಾರಿಯುತ ಸ್ಥಾನದಲ್ಲಿರುವವರ ಇಂಥ ನಡುವಳಿಕೆ ಮತದಾರನ ಸೂಕ್ಷ್ಮ ಮನಸ್ಸಿಗೆ ಪರಿಣಾಮ ಬೀರುತ್ತದೆ. ಆದುದರಿಂದ ಬಹುಮತ ಪಡೆದ ಒಂದೇ ಸರ್ಕಾರ ನಡೆಸಿದರೇ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ಸಾಗುತ್ತದೆ.
ಭಾಗ್ಯಶ್ರೀ ಐತಾಳ್ ಕರಂಬಳ್ಳಿ
ಉಪನ್ಯಾಸಕಿ

ರಾಜಕೀಯ ಪಕ್ಷದ ಮೇಲೆ ಆಸಕ್ತಿ ಬಂದಿದ್ದು ಇತ್ತೀಚಿನ ದಿನಗಳಲ್ಲಿ ಪ್ರಧಾನ ಮಂತ್ರಿಗಳ ಕಾರ್ಯವೈಖರಿ ನೋಡಿ ಆದರೆ ಇದೀಗ ರಾಜ್ಯ ಸರ್ಕಾರದ  ಈ ಪರಿಸ್ಥಿತಿ ನೋಡುವಾಗ ನಮಗೆ ರಾಜಕೀಯದ ಮೇಲೆ  ಹೇಸಿಗೆ ಉಂಟಾಗಿದೆ .. ರಾಜಕಾರಣಿಗಳಿಗೆ  ತಮ್ಮ ಮಾತೃ ಪಕ್ಷದ ಮೇಲೆ ನಿಷ್ಠೆ ಇಲ್ಲ, ಪಕ್ಷಾಂತರ ಮಾಡದಂತೆ  ಇವರ ರಕ್ಷಣೆಗೆ ಅಷ್ಟೊಂದು ಖರ್ಚು, ಸದನದ ಒಳಗೆ ಹೊರಗೆ ಎಲ್ಲೆಂದರಲ್ಲಿ ಕಿತ್ತಾಟ , ವಿಶ್ವಾಸ ಮತ ಯಾಚನೆಯಲ್ಲಿ ಇಷ್ಟೊಂದು ನಾಟಕ .. ಇದೆಲ್ಲ ನೋಡುವಾಗ ನಮಗೆ ಯಾವ ಪಕ್ಷದ ಆಡಳಿತ ಬೇಡ ರಾಷ್ಟ್ರಪತಿ ಆಳ್ವಿಕೆ ಇದ್ದರೆ ಒಳ್ಳೇದು ಅನಿಸುತ್ತಿದ್ದೆ

ಶ್ವೇತಾ ಉಲ್ಲಾಸ್ ಹೊಳ್ಳ  ಮಂಗಳೂರು  .

 ಕರ್ನಾಟಕದ ಈಗಿನ ರಾಜಕೀಯ ಪರಿಸ್ಥಿತಿ ನರಕಸದ್ರಶವಾಗಿದೆ ಇದೊಂದು ನಮ್ಮಂಥ ಮತದಾರರಿಗೆ ಪಾಠವಾಗಿದೆ , ಬಹುಮತ ಕೊಟ್ಟು ಒಂದು ಪಕ್ಷವನ್ನ ಆರಸದೆ ಇರುವ ಪರಿಣಾಮ ಇಂದು ನಮ್ಮ ಶಾಸಕರು ತಮ್ಮ ಪರಿಮಿತಿಯನ್ನ ಮರೆತು ಬಿಟ್ಟಿದ್ದಾರೆ ಇದೆಲ್ಲದಕ್ಕೂ ಪೂರ್ಣವಿರಾಮ ನೀಡಿ ರಾಷ್ಟ್ರಪತಿಗಳ ಆಳ್ವಿಕೆ ಬಂದರೆ ಉತ್ತಮ ಅನ್ನುವುದು ನಮ್ಮ ಭಾವನೆ .
 
ಜಯಶ್ರೀ ಮಂಗಳೂರು .
ರಾಜ್ಯ ರಾಜಕೀಯದಲ್ಲಿ ಅತ್ಯಂತ ಕೀಳು ಮಟ್ಟದ ರಾಜಕೀಯದ ಆಟ ಆಡುತ್ತಿವೆ ಪ್ರಮುಖ ಮೂರೂ ಪಕ್ಷಗಳು.
ಅದಷ್ಟು ಜನ ಶಾಸಕರು ತಮ್ಮ ಕ್ಷೇತ್ರದಲ್ಲಿನ ಆಗು ಹೋಗುಗಳಿಗೆ ಕಿವಿಗೊಡದೆ ರೆಸಾರ್ಟ್‌ ರಾಜಕೀಯ ಎಂಬ ಕಣ್ಣಾ ಮುಚ್ಣಾಲೆ‌ ಆಟ ಆಡುತ್ತಿದ್ದಾರೆ.
ಇತ್ತ ಅಲ್ಪಮತದ ಸರಕಾರದಿಂದ ತರಾತುರಿಯಲ್ಲಿ ಪ್ರಮುಖ ಕಡತಗಳ ವಿಲೇವಾರಿಯಾಗುತ್ತಿದೆ.
ಸದನದ ಕಲಾಪವು ಅನಗತ್ಯ ಚರ್ಚೆಗಳು ನಡೆದು ಕಾಲಹರಣ ಮಾಡುವ ಉದ್ದೇಶ ಬಹಳ ಸ್ಪಷ್ಟವಾಗಿ ಜನರಿಗೆ ಗೋಚರಿಸುತ್ತಿದೆ.
ಆಡಳಿತಾರೂಢ ಸಮ್ಮಿಶ್ರ ಸರಕಾರವು ತಾನು ಅಧಿಕಾರ ಕಳಕೊಳ್ಳುವ ಭೀತಿಯಿಂದಾಗಿ ಈ ರೀತಿಯಾಗಿ ಸದನದಲ್ಲಿ ಅನೇಕ ಕ್ರೀಯಾಲೋಪಗಳನ್ನು ಎತ್ತಿ ಹಿಡಿಯುವ ಮೂಲಕ ಸಮಯವನ್ನು ವ್ಯರ್ಥ ಮಾಡುವ ವ್ಯವಸ್ಥಿತ ಸಂಚು ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಸ್ಪೀಕರ್ ರವರು ಏಕಮುಖವಾಗಿ ಹಲವು ವಿಚಾರಗಳಲ್ಲಿ ಸ್ಪಂದಿಸುವುದು ನೋಡಿದರೆ ಜನರನ್ನು ಮೂರ್ಖರೆಂದು ತಿಳಿದಿದ್ದಾರೆ ಎಂದೆನಿಸುತ್ತದೆ.
ಒಟ್ಟಾರೆಯಾಗಿ ಸಾಮಾನ್ಯ ಜನರ ದುಡ್ಡು ನಾನಾ ರೀತಿಯಲ್ಲಿ ಪೋಲಾಗುತ್ತಿದೆ. ಬಡವರು ತಮ್ಮ ದಿನ ನಿತ್ಯದ ಅಗತ್ಯ ಹಕ್ಕುಗಳಿಗಾಗಿ ಕಛೇರಿಯಿಂದ ಕಛೇರಿಗೆ ಅಲೆದಾಡುವ ಪರಿ ದಿನೇ ದಿನೇ ಹೆಚ್ಚಾಗುತ್ತಾ ಇದೆ. ಇದ್ಯಾವುದೂ ಜನ ಪ್ರತಿನಿಧಿಗಳ ಗಮನಕ್ಕೆ ಬಾರದೇ ಇರುವುದು ವಿಪರ್ಯಾಸವೇ ಸರಿ.
ಗಿರೀಶ್ ಎಸ್‌ ಪಿ ವಕೀಲರು ಉಡುಪಿ. 
 ಪ್ರಸಕ್ತ ರಾಜಕೀಯ ಬೆಳವಣಿಗೆಯಿಂದ ಕರ್ನಾಟಕದ ಜನತೆ ಬೇಸತ್ತಿದೆ. ನಾವು ವೋಟ್ ಹಾಕಿದ್ದು ನಮ್ಮ ಏಳಿಗೆಗೋ ಅಥವಾ ರಾಜಕಾರಣಿಗಳ ಸ್ವಾರ್ಥಕ್ಕೋ ಅಂತ ತಿಳೀತಿಲ್ಲ. ಗಲೀಜು ರಾಜಕಾರಣ. ನಮಗೆ ಹೇಸಿಗೆಯಾಗುತ್ತಿದೆ.
ನಮ್ಮ ರಾಜಕಾರಣಿಗಳಿಗಿಂತ ಬೀದಿ ನಾಯಿಗಳೇ ಎಷ್ಟೋ ವಾಸಿ. ಅವುಗಳಿಗೆ ಕಡೇ ಪಕ್ಷ ಅನ್ನ ಹಾಕಿದವನ ಮೇಲೆ ನಿಯತ್ತಾದರೂ ಇದೆ.
ನಮಗೆ ವೋಟ್ ಹಾಕಲಿಕ್ಕೆ ಮಾತ್ರ ಹಕ್ಕಿದೆ. ಹಿಂತೆಗೆಯುವ ಹಕ್ಕಿಲ್ಲ. ಇಂತಹ ಸಂದರ್ಭದಲ್ಲಿ *ಮತ ಹಿಂಪಡೆಯುವ ಹಕ್ಕ* ನ್ನು ಮತದಾರನಿಗೆ ಕೊಟ್ಟಲ್ಲಿ ಅವರು support ಹಿಂಪಡೆದಂತೆ ನಾವು ಕೂಡ support ಹಿಂಪಡೆಯಬಹುದು.
ಒಬ್ಬನಿಗೆ ಖುರ್ಚಿ ಉಳಿಸಿಕೊಳ್ಳುವ ಧಾವಂತದಲ್ಲಿ ರಾಜ್ಯದ ಅಭಿವೃದ್ಧಿ ಬೇಡ. ಇನ್ನೊಬ್ಬನಿಗೆ ತನ್ನವರನ್ನು control ನಲ್ಲಿಡಲು ಹರಸಾಹಸ ಪಡಬೇಕಾದ ಅವಸ್ಥೆ.
ಮಗದೊಬ್ಬನಿಗೆ ಅಧಿಕಾರವನ್ನು ತನ್ನ ಸುಪರ್ದಿಗೆ ತರಲೇ ಬೇಕೆಂಬ ಹುಚ್ಚಿನಿಂದಾಗಿ ರಾಜ್ಯದ ಹಿತವನ್ನು ಮೆಟ್ಟಲೂ ಹಿಂಜರಿಯದಷ್ಟು ಮೂರ್ಖತನ. ನಗಬೇಕೋ ಅಳಬೇಕೋ ತಿಳಿಯದಾಗಿದೆ. ಆದರೆ ಒಂದಂತೂ ಸತ್ಯ.. ರಾಜ್ಯ ರಾಜಕಾರಣ ಕೊಳೆತು ನಾರುತ್ತಿದೆ.  ನಾವು ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ. ಇತರ ರಾಜ್ಯದವರು ನಮ್ಮನ್ನು ನೋಡಿ ನಗುವ ಪರಿಸ್ಥಿತಿ.
ಅಯ್ಯೋ ದೇವಾ ಕಾಪಾಡು ಕರುನಾಡನ್ನು..
ಮನೋಜ್ ಕಡಬ
ಸರಕಾರವೋ? ದೊಂಬರಾಟವೋ?
ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ ರಾಜ್ಯದ ಏಳಗೆಗೆ ಬಳಸಬೇಕೇ ಹೊರತು ಅಧಿಕಾರದ ಸ್ವಾರ್ಥಕ್ಕಲ್ಲ. ರಾಷ್ಟ್ರ ಮಟ್ಟದಲ್ಲಿ ಮೋದಿ ಕಾರ್ಯವೈಕರಿ ನೋಡಿ ಮೆಚ್ಚಿ ಪ್ರೇರೇಪಣೆಗೊಂಡ ಕರ್ನಾಟಕದ ಯುವಜನತೆ ನಮ್ಮ ಇಲ್ಲಿನ ಹೇಸಿಗೆ ರಾಜಕಾರಣ ನೋಡಿ ತಲೆತಗ್ಗಿಸುವಂತಾಗಿದೆ ಎಂದರೆ ತಪ್ಪಾಗಲಾರದು.
ಅಧಿಕಾರದ ಅಮಲಿನಿಂದ, ಪಕ್ಷ ನಿಷ್ಟೆ ಬಿಡಿ ಜನಸಾಮಾನ್ಯನ ಪರವಾಗಿರಬೇಕಾದ ಜನತಾ ನಿಷ್ಟೆಯೂ ಇಲ್ಲ ಎಂಬುದು ಸಾಬೀತಾಗಿದೆ. ಸದ್ಯಕ್ಕಂತೂ ಈ ದೊಂಬರಾಟ  ಅಂತ್ಯಕ್ಕೆ ರಾಷ್ಟ್ರಪತಿಗಳ ಮಧ್ಯಪ್ರವೇಶ ಸೂಕ್ತವೆನಿಸುತ್ತಿದೆ.
ಸೂಕ್ತ ಹಾಗೂ ಸುಭದ್ರ ಸರಕಾರದ ರಚನೆಯಾಗುವ ನಿರೀಕ್ಷೆ ಇದೆ.
ಪ್ರಸೀದ ಐತಾಳ್ ,ಸುರತ್ಕಲ್

. *ಪ್ರಜಾತಂತ್ರಕ್ಕೆ ಬೆಲೆಯಿದೆಯೇ??*

ಕರ್ನಾಟಕ ರಾಜ್ಯದಲ್ಲಿ 2018ನೇ ಇಸವಿ ಎಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಸಿಕ್ಕಿದ್ದು ಅದರಲ್ಲಿಯೂ ಬಹುಮತ ಪಡೆಯುವಲ್ಲಿ ವಿಫಲವಾದ ಪಕ್ಷಗಳಲ್ಲಿ ಎರಡು ಪಕ್ಷಗಳು ಸಮ್ಮಿಶ್ರ ಸರಕಾರ ನಡೆಸುವುದಾಗಿ ಒಮ್ಮತದಿಂದ ಒಪ್ಪಿಕೊಂಡು ಒಂದು ವರ್ಷ ಕಳೆಯಿತು. ಆದರೆ ಇಂದು ನಾವು ನೋಡುತ್ತಿರುವ ಬೆಳವಣಿಗೆಯಾದರೂ ಏನು ??? ಬೇಲಿಯೇ ಹೊಲವನ್ನು ಮೆದ್ದಾಗ ಎಂಬ ಗಾದೆಯಂತೆ ನ್ಯಾಯವನ್ನು ರಾಜ್ಯ ಧರ್ಮವನ್ನು ಕಾಪಾಡಬೇಕಾದ ಶಾಸಕಾಂಗವು ಇಂದು ಅತಂತ್ರ ಸ್ಥಿತಿಯಲ್ಲಿದೆ ಶಾಸಕರುಗಳು ಜನಪರವಾದ ಕೈಂಕರ್ಯವನ್ನು ಮಾಡುವರೇ ವಿಫಲಗೊಂಡಿದ್ದು ಸದ್ರಿ ತಮ್ಮ ಕುರ್ಚಿಗಾಗಿ ನಡೆಸುತ್ತಿರುವ ನಾಟಕಗಳನ್ನು ನೋಡುವಾಗ ಕನ್ನಡಿಯನ್ನು ಕಂಡು ಉಗಿದ ಹಾಗೆ ಇಡೀ ದೇಶದ ಜನತೆ ನಮ್ಮ ರಾಜ್ಯದ ಘನ ಸರ್ಕಾರದ ಬಗ್ಗೆ ಛೀಮಾರಿ ಹಾಕತೊಡಗಿದ್ದಾರೆ. ಹಾಗಾದರೆ ಮುಂದಿನ ಪೀಳಿಗೆಗೆ ನಾವು ಕೊಡುವ ಸಂದೇಶವಾದರೂ ಏನು?? ಪ್ರಜಾಸತ್ತಾತ್ಮಕವಾದ ಸರಕಾರ ಸದೃಢವಾಗಿ ನಿತ್ಯ ನಿರಂತರ ಜನಪರ ಕಾರ್ಯಗಳಲ್ಲಿ ಇರಬೇಕಾದವರು ಇಂದು ತಮ್ಮ ಅಧಿಕಾರ ಲಾಲಸೆಗಾಗಿ ಹಪಹಪಿಸ ತೊಡಗಿದ್ದಾರೆ .ಹಾಗಾದರೆ ನಾವು ನಂಬಿಕೆಯಿಟ್ಟು ಮತವನ್ನು ಚಲಾಯಿಸಿ ಗೆಲ್ಲಿಸಿದ ಶಾಸಕರುಗಳ ನಿಷ್ಠೆ  ನಿಷ್ಠೆ ಇದೇ ಏನು ?? ರಾತ್ರೋರಾತ್ರಿ ಸರಕಾರವನ್ನು ಉಳಿಸುವ ತರುವಾಯ ಸುಪ್ರೀಂಕೋರ್ಟ್ ಹೋಗುವ ಇವರುಗಳು ಯಾವತ್ತಾದರೂ ಕಳಸಾ-ಬಂಡೂರಿ ಬಂಡೂರಿ ಕಾವೇರಿಗಾಗಿ ಅಥವಾ ರೈತರುಗಳ ಏಳಿಗೆಗಾಗಿ ಮತ್ತು ಭ್ರಷ್ಟಾಚಾರ-ಭಯೋತ್ಪಾದನೆ ಗಳಂತಹ ವಿಷಯಗಳ ಬಗ್ಗೆ ಎಂದಾದರೂ ಸುಪ್ರೀಂಕೋರ್ಟ್ ಬಾಗಿಲನ್ನು ತಟ್ಟಿದ್ದಾರೆ ಏನೂ ??ಹಾಗಾದರೆ ಪ್ರಜಾತಂತ್ರಕ್ಕೆ ಬೆಲೆ ಎಲ್ಲಿದೆ??
ಕಾರುಣ್ಯನಿಧಿ ಸುರತ್ಕಲ್.
ಇಂದಿನ ರಾಜಕಾರಣ ಎತ್ತ ಸಾಗುತ್ತಿದೆ ಎಂಬುದು ನಮ್ಮೆಲ್ಲರ ಪ್ರಶ್ನೆ
ಸಕಾ೯ರ ಅಲ್ಪಮತಕ್ಕೆ ಬಂದಿದೆ.ಅತೃಪ್ತ ಶಾಸಕರು ಸಕಾ೯ರದ ಮೇಲೆ ವಿಶ್ವಾಸವಿಲ್ಲ ಎಂದು ಅವರ ದಾರಿಗೆ ಹೋಗಿದ್ದಾರೆ.
ನ್ಯಾಯಾಲಯ ಈ ವಿಚಾರದಲ್ಲಿ ತನ್ನ ತೀಪು೯ ನೀಡಿದೆ.ಸಕಾ೯ರ ಯಾರದೇ ಬರಲಿ ಆದರೆ ರಾಜ್ಯದ ಜನರಿಗೆ ಈ ರಾಜಕೀಯ ನಾಟಕದಿಂದ ಮುಕ್ತಿ ಸಿಗಲಿ ರೇಸಾಟ್೯ ವಾಸದಿಂದ ಶಾಸಕರು ಜನರತ್ತ ಗಮನ ಹರಿಸಬೇಕಾಗಿದೆ.
ಇಲ್ಲವಾದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ.
ರಾಘವೇಂದ್ರ ಪ್ರಭು, ಕವಾ೯ಲು.
*ವಿಧಾನ ಸಭೆಯೋ  ಸಂತೆ ಮಾರುಕಟ್ಟೆಯೋ*
ನಾವು ಆರಿಸಿದಂತಹ ನಮ್ಮ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಬಿಟ್ಟು ಅಧಿಕಾರದ ಆಸೆಗೋಸ್ಕರ ನಾವು (ಪ್ರಜೆಗಳು) ಭರಿಸಿದ ತೆರಿಗೆ ಹಣದಿಂದ ಮೋಜು ಮಸ್ತಿ ಮಾಡಿಕೊಂಡು ರೆಸಾರ್ಟ್ ರಾಜಕೀಯ,ಪಕ್ಷಾಂತರ,ದುಂದುವೆಚ್ಚ ಹೀಗೆ ಹಲವಾರು ಡ್ರಾಮಾ‌ ಗಳನ್ನು ಮಾಡುತ್ತಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಈ ರೀತಿಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಘನವೆತ್ತ ಸುಪ್ರೀಂ ಕೋರ್ಟ್ ಮುಂದೆ ಬಂದು, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗದಂತಹ ರಾಜಕೀಯ ತೀರ್ಪನ್ನು ಕೊಟ್ಟು ರಾಜ್ಯದ ಅಭಿವ್ರದ್ಧಿಗೆ ಸಹಕಾರಿಯಾಗಬೇಕೆಂದು ನನ್ನ‌ ಅಭಿಪ್ರಾಯ.
ವಿಜಯ ನರಸಿಂಹ ಐತಾಳ್ ಬ್ರಹ್ಮೇರಿ
ರಾಜ್ಯ ರಾಜಕೀಯದಲ್ಲಿ ಗೊಂದಲ ಇದೇ ಮೊದಲಲ್ಲ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೆ ವಿಪಕ್ಷ ಸತತವಾಗಿ ಸರಕಾರವನ್ನು ಉರುಳಿಸಲು ಪ್ರಯತ್ನ ಪಡುತ್ತಿರುವುದು ದುರದೃಷ್ಟ. ಆಡಳಿತ ಮಾಡುವ ಮೈತ್ರಿ ಪಕ್ಷಗಳ ತಪ್ಪನ್ನು ಜನರಿಗೆ ತಿಳಿಸುವ ಕೆಲಸಗಳನ್ನು ವಿಪಕ್ಷ ಮಾಡಬೇಕಾಗಿದೆ. ಆದರೆ ಇಲ್ಲಿಯ ವಿಪಕ್ಷ ಸ್ವತಃ ಮುಂದಿನ ಎಂದು ಮೈತ್ರಿ ಸರಕಾರದ ಶಾಸಕರನ್ನು ರೆಸಾರ್ಟ್ಗೆ ಕಳುಹಿಸುವ ಕೆಲಸ ಮಾಡುತ್ತಿದೆ. ಸುಪ್ರೀಂಕೋರ್ಟ್ ಬಹುತೇಕ ಕೇಂದ್ರ ಸರಕಾರದ ಹಿಡಿತದಲ್ಲಿದೆ. ಸ್ಪೀಕರ್ ನಡೆ ಸಂವಿಧಾನತ್ಮಕ ವಾಗಿದೆ. ಚುನಾವಣೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಧಿಕಾರಕ್ಕೆ ಬರುವ ಶಾಸಕರು, ತನ್ನನ್ನು ಆರಿಸಿದ ಮತದಾರರ ಕೆಲಸ ಮಾಡುವ ಬದಲು ಅಧಿಕಾರಕ್ಕೋಸ್ಕರ ರೆಸಾರ್ಟ್ನಲ್ಲಿ ಮಜಾ ಮಾಡುತ್ತಿದ್ದಾರೆ. ಇದು ಮತದಾರ ಪ್ರಭುವಿಗೆ ಮಾಡುವಂತಹ ಅತಿ ದೊಡ್ಡ ದ್ರೋಹ ವಾದರೆ ಕರ್ನಾಟಕದ ಬೊಕ್ಕಸಕ್ಕೆ ಅತಿ ದೊಡ್ಡ ನಷ್ಟ. ಹೀಗೆ ಮುಂದುವರಿದರೆ ಜನರು ಚುನಾವಣೆಯಲ್ಲಿ ಮತದಾನ ಮಾಡುವುದರ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
ಅಲ್ವಿನ್ ದಾಂತಿ, ಪೆರ್ನಾಲ್ ಕೊಂಕಣಿ ಸಾಹಿತಿ
ಪ್ರಸ್ತುತ ರಾಜಕೀಯ ಗಬ್ಬೆದ್ದು ಹೋಗಿದೆ. ಆ ಪಕ್ಷ.. ಈ ಪಕ್ಷವೆಂದಲ್ಲ. ಅಧಿಕಾರ ಸಿಕ್ಕಿದರೆ ಎಲ್ಲರೂ ಒಂದೆ. ಜನರಿಗೆ(ಮತದಾರ) ಇವರ ಡೊಂಬರಾಟ ಬೇಡವೇ ಬೇಡ. ಯಾವ ಪಕ್ಷ ಅಧಿಕಾರ ಬಂದರೂ ಜನರಿಗೆ ಉಪಯೋಗವಿಲ್ಲ. ಒಟ್ಟಾರೆ ಹೇಳುವುದಾದರೆ ರಾಷ್ಟ್ರಪತಿ  ಆಳ್ವಿಕೆ ಸೂಕ್ತ. ಇನ್ನು ಆರು ತಿಂಗಳು ಎಲ್ಲಾ ಶಾಸಕರು ರೆಸಾಟ್ ನಲ್ಲಿ ಮಜಾ ಮಾಡಲಿ.
ನಾವು ಆರಿಸಿ ಕಳಿಸಿದ ಶಾಸಕರಿಗೆ ಮಜಾ..
ಮತದಾರನಿಗೆ ಸಜಾ.

ಜನಾರ್ದನ್ ಕೊಡವೂರು ಪತ್ರಿಕಾ ಛಾಯಾಗ್ರಾಹಕ
ರಾಜ್ಯದಲ್ಲಿ ಮೈತ್ರಿ ಸರಕಾರ ಬರಲೇಬಾರದು. ಏಕ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಜನರ ಕೆಲಸಗಳು ಸುಲಭವಾಗಿ ಆಗುತ್ತವೆ ಮತ್ತು ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಸಮ್ಮಿಶ್ರ ಸರಕಾರಗಳಿಂದ ಜನರಿಗೆ ಮತ್ತು ರಾಜ್ಯಕ್ಕೆ ಏನೂ ಪ್ರಯೋಜನವಿರುವುದಿಲ್ಲ. ಶಾಸಕನಾಗಿ ಆಯ್ಕೆಯಾದವನು ಜನರ ಪ್ರೀತಿಯಿಂದ ತನ್ನ ಶಾಸಕ ತನದ ಅವಧಿಯಲ್ಲಿ ತನ್ನ ಕ್ಷೇತ್ರದ ಕೆಲಸವನ್ನು ಮಾಡಬೇಕೇ ವಿನಾ ಮತ್ತೊಂದು ಪಕ್ಷಕ್ಕೆ ಹಾರು ವಂತಾಗಬಾರದು. ಪಕ್ಷದ ಮೇಲಿನ ಪ್ರೀತಿಯಿಂದ ಮತ್ತು ಆ ವ್ಯಕ್ತಿಯ ಮೇಲಿನ ನಂಬಿಕೆಯಿಂದ ಜನರು ಆ ವ್ಯಕ್ತಿಯನ್ನು ಶಾಸಕನಾಗಿ ಆಯ್ಕೆ ಮಾಡುತ್ತಾರೆ. ಆದರೆ ಅಧಿಕಾರ ಸಿಕ್ಕಿದ ಶಾಸಕ ಹಣದ ಹಿಂದೆ ಹೋದರೆ ಜನರಿಗೆ ಖಂಡಿತವಾಗಿ ದ್ರೋಹ ಬಗೆದಂತೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಜನರನ್ನು ರಾಜಕೀಯದಿಂದ ದೂರ ಸರಿಯುವಂತೆ ಮಾಡಿದೆ.

ಜಯ ಸಿ ಕೋಟ್ಯಾನ್ 
ಅಧ್ಯಕ್ಷರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೊಗವೀರ ಮಹಾಜನ ಸಂಘ (ರಿ) ಉಚ್ಚಿಲ

ಜನರ ಸಮಸ್ಯೆಗಳನ್ನು ಆಲಿಸಬೇಕಾದ ಶಾಸಕರು ರೆಸಾರ್ಟ್ ನಲ್ಲಿ ಕಾಲಹರಣ ಮಾಡುತ್ತಾ ಇದ್ದಾರೆ. ಕುದುರೆ ವ್ಯಾಪಾರ ಎನ್ನುವುದು ರಾಜ್ಯ ರಾಜಕೀಯದಲ್ಲಿ ಸರ್ವೇ ಸಾಮಾನ್ಯವಾಗಿ ಹೋಗಿದೆ. ರೆಸಾರ್ಟ್ ನಲ್ಲಿ ಅವಿತುಕೊಳ್ಳುವ ದುಸ್ಥಿತಿ ನಮ್ಮ ಶಾಸ್ತ್ರಿಗೆ ಬಂದದ್ದು ನಿಜಕ್ಕೂ ದುರದೃಷ್ಟ. ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ ಇಲ್ಲದೇ ಹೋಗಿದೆ. ಶಾಸಕನಾಗಲು ಅವಕಾಶ ಕೊಟ್ಟಂತಹ ಪಕ್ಷದ ಮೇಲೆ ನಂಬಿಕೆ ಇಲ್ಲ. ತನ್ನ ಶಾಸಕ ಯಾವ ಹೊತ್ತಿನಲ್ಲಿಯೂ ಬೇರೆ ಪಕ್ಷಕ್ಕೆ ಹೋಗಬಹುದು ಎಂಬ ಹೆದರಿಕೆಯಲ್ಲಿ ಪಕ್ಷಗಳಿವೆ. ಇಂತಹ ಕೆಟ್ಟ ರಾಜಕೀಯ ನೋಡುವಂಥ ಪರಿಸ್ಥಿತಿ ಕರ್ನಾಟಕ ರಾಜ್ಯದ ಮತದಾರರದ್ದಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ, ಮಳೆಗಾಲ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇಂತಹ ಆರ್ಥಿಕ ಹಿನ್ನಡೆಯ ಪರಿಸ್ಥಿತಿಯಲ್ಲಿ ಶಾಸಕರ ಕೆಟ್ಟ ನಾಟಕ ನೋಡುವ ಭಾಗ್ಯ ಸಿಕ್ಕಿದೆ. ಪಕ್ಷಾಂತರ ಮಾಡುವ ಯಾವುದೇ ಪಕ್ಷದ ಶಾಸಕನನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನು ಮಾಡಬೇಕಾದ ಜವಾಬ್ದಾರಿ ಸುಪ್ರೀಂಕೋರ್ಟ್ ತೆಗೆದುಕೊಳ್ಳಬೇಕಾಗಿದೆ. ಆಗ ಮಾತ್ರ ಇಂತಹ ಕೆಟ್ಟ ರಾಜಕೀಯದಿಂದ ಮುಕ್ತಿ ಕಾಣಲು ಸಾಧ್ಯ.

ಅಲ್ವಿನ್ ಅಂದ್ರಾದೆ ಸಾಸ್ತಾನ 
ನಟ, ನಿರ್ದೇಶಕ
ರಾಜ್ಯದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಚರ್ಚಿಸಲು ಹಲವಾರು ವಿಷಯಗಳಿವೆ. ವಿಶೇಷವಾಗಿ ಮಳೆಯಿಲ್ಲ ,ನೀರಿನ ಕೊರತೆ ಜಾಸ್ತಿಯಾಗುತ್ತಿದೆ. ಬರಗಾಲ ಜಾಸ್ತಿಯಾಗುತ್ತಿದೆ. ರೈತರು ಕಂಗಾಲಾಗಿದ್ದಾರೆ. ಹಲವಾರು ಮೂಲಭೂತ ಸಮಸ್ಯೆಗಳಿವೆ. ಜನರಿಂದ ಆಯ್ಕೆಗೊಂಡ ಶಾಸಕರು ವಿಧಾನಸಭೆಯಲ್ಲಿ ಕ್ಷೇತ್ರದ ಅಥವಾ ರಾಜ್ಯದ ಸಮಗ್ರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು, ಅಧಿಕಾರಕ್ಕಾಗಿ ಚರ್ಚೆ ಮಾಡುತ್ತಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಬೇಕಾದ ಶಾಸಕರು, ರೆಸಾರ್ಟ್ ರಾಜಕೀಯದಲ್ಲಿ ಬಿಝಿಯಾಗಿದ್ದಾರೆ. ಶಾಸಕರು ಮತ್ತು ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಸ್ವೀಕರಿಸುತ್ತಾರೆ. ಅಧಿಕಾರಕ್ಕೋಸ್ಕರ ಮಾಡಿದ ಪ್ರಮಾಣ ವಚನವನ್ನು ಮರೆತುಬಿಡುತ್ತಾರೆ. ರಾಜ್ಯದ ಪ್ರಮುಖ ಮೂರು ಪಕ್ಷಗಳಲ್ಲಿ ಘಟಾನುಘಟಿ ನಾಯಕರುಗಳಿದ್ದು, ರಾಜಕೀಯ ವೈರತ್ವವನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೋಸ್ಕರ ಕೆಲಸ ಮಾಡಬೇಕಾಗಿದೆ. ವಿಧಾನಸಭೆಯ ಕಲಾಪಗಳಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಮತ್ತು ಅಧಿಕಾರಗೋಸ್ಕರ ಹೋರಾಟ ಮಾಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಖಂಡಿತವಾಗಿಯೂ ರಾಜ್ಯದ ಅಭಿವೃದ್ಧಿಯಾಗಲಿದೆ.
ಆರ್. ಜೆ. ಎರೋಲ್ ಗೊನ್ಸಾಲ್ವಿಸ್ 
92.7 ಬಿಗ್ ಎಫ್.ಎಂ
ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕರಣದಲ್ಲಿ ನಡೆಯುವ ಬೆಳವಣಿಗೆಗಳನ್ನು ನೋಡುವಾಗ ನಾವು ಆರಿಸಿ ಕಳಿಸಿದ ಪ್ರತಿನಿಧಿಗಳಿಗೆ ತಮ್ಮ ರಾಜ್ಯದ ಜನತೆಯ ಬಗ್ಗೆ ನಿಜವಾದ ಕಾಳಜಿ ಇದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.
ಜನರು ಪ್ರತಿನಿಧಿಗಳನ್ನು ಆರಿಸುವಾಗ ತಮ್ಮ ಕ್ಷೇತ್ರದ ಅಭಿವೃದ್ದಿ, ಸಮಸ್ಯೆಗಳ ಪರಿಹಾರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡು ಪ್ರತಿನಿಧಿಗಳನ್ನು ಆರಿಸಿ ಕಳುಸುತ್ತಾರೆ.
ಆದರೆ ಕೇವಲ ಅಧಿಕಾರದ ದೃಷ್ಟಿಯಿಂದ ಜನರ ಹಿತಾಸಕ್ತಿಗಳನ್ನು ಬಲಿಕೊಡುವ ಮೊದಲು ಪ್ರತಿನಿಧಿಗಳು ಯೋಚಿಸುವ ಅವಶ್ಯಕತೆ ಇದೆ.
ಇವತ್ತು ರಾಜಕೀಯ ಪರಿಸ್ಥಿಗಳು ಬದಲಾಗಿದೆ, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಆದ್ದರಿಂದ ಪ್ರತಿನಿಧಿಗಳು ಜನರ ಭಾವನೆಗಳನ್ನು ಗೌರವಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
ಸುನಿಲ್ ಸಾಲ್ಯಾನ್, ಕಡೆಕಾರ್
ಸಾಮಾಜಿಕ ಕಾರ್ಯಕರ್ತರು

Leave a Reply

Your email address will not be published. Required fields are marked *

error: Content is protected !!