ಪ್ರಮೋದ್ ಕಾಂಗ್ರೆಸ್‌ನಲ್ಲಿಲ್ಲ:ಮೊಯ್ಲಿ ಹೇಳಿಕೆಗೆ ಕಾಂಗ್ರೆಸ್ನಲ್ಲಿ ವ್ಯಾಪಕ ಆಕ್ರೋಶ

ಉಡುಪಿ : ಜನತಾ ದಳದ ಶಾಲನ್ನು ಹಾಕಿ ಜೆಡಿಎಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿ ಎಂದು ತಿರುಗುತ್ತಿದ್ದ ವೀರಪ್ಪ ಮೊಯ್ಲಿ ಅವರೇ, ನೀವು ಯಾವ ಪಕ್ಷದ ಸದಸ್ಯರೆಂದು ಮೊದಲು ತಿಳಿಸಿ ಎಂದು ಸೋಷಿಯಲ್ ಮಾಧ್ಯಮಗಳಲ್ಲಿ ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ವಿರುದ್ಧ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನಕ್ಕೆ ಭೇಟಿ ಕೊಟ್ಟ ವೀರಪ್ಪ ಮೊಯ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪ್ರಮೋದ್ ಮಧ್ವರಾಜ್ ಪ್ರಸ್ತುತ ಜೆಡಿಎಸ್ ಪಕ್ಷದಲ್ಲಿದ್ದು, ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕಾದರೆ ಅರ್ಜಿಯನ್ನು ಸಲ್ಲಿಸಬೇಕು ಇಷ್ಟರವರೆಗೆ ಅವರು ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆಯನ್ನು ಮಾಡಿದ್ದರು.

ವೀರಪ್ಪ ಮೊಯ್ಲಿ ಅವರ ಹೇಳಿಕೆ ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಮೈತ್ರಿ ಸರಕಾರ ಆಡಳಿತದಲ್ಲಿರುವುದರಿಂದ ಹೈಕಮಾಂಡ್ ತೀರ್ಮಾನದಂತೆ ಜೆಡಿಎಸ್ ಪಕ್ಷದ ಪರವಾಗಿ ನಾವು ಮತವನ್ನು ಕೇಳಿದ್ದೇವೆ. ಪ್ರಮೋದ್ ಮಧ್ವರಾಜ್ ಮಾತ್ರವಲ್ಲ ಮೊಯ್ಲಿ ಹೇಳಿಕೆ ಪ್ರಕರ ಕಾರ್ಯಕರ್ತರೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅರ್ಜಿ ಹಾಕಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಅಸಮಾಧನದ ಮಾತುಗಳು ಹೊರಬರುತ್ತಿದೆ.

ಓ ಮೊಯ್ಲಿಯವರೇ… ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟ ಪತ್ರ ತೋರಿಸಿ ಮೊದಲು.. ಸುಮ್ಮನೆ ಉಡುಪಿಗೆ ಬಂದು ಗೊಂದಲ ಸೃಷ್ಟಿಸಬೇಡಿ. ನಿಮ್ಮ ಮಗನಿಗೆ ಎಂಎಲ್‌ಎ ಸೀಟ್ ಸೀಟ್ ಗಾಗಿ ಜಾಗ ಹುಡುಕುವುದು ಇನ್ನೂ ಮುಗಿದಿಲ್ಲ್ವಾ?ಕಾಂಗ್ರೆಸ್ನಲ್ಲಿ ಉಡುಪಿಯಲ್ಲಿ ಲೋಕಸಭೆಗೆ ಅಭ್ಯರ್ಥಿ ರೆಡಿ ಆಗದಂತೆ ತಡೆದು, ಮುಂದಿನ ಲೋಕಸಭಾ ಚುನಾವಣೆಯ ಒಳಗೆ ಹರ್ಷ ಮೊಯ್ಲಿಗೆ ದಾರಿ ಸುಗಮ ಮಾಡಿಕೊಡುವ ಎಂದು ತಾವು ಆಡಿದ ನಾಟಕ ಇವತ್ತು ಬಹಿರಂಗವಾದಂತಿದೆ. ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ನಲ್ಲಿ ಇಲ್ಲ ಎಂಬ ಬಗ್ಗೆ ಯಾವ ಆಧಾರದಲ್ಲಿ ತಾವು ಹೇಳಿಕೆ ನೀಡಿದ್ದೀರಿ? ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವೀರಪ್ಪ ಮೊಯ್ಲಿ ಅವರ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ದೇಶದಲ್ಲಿಯೇ ತೀರ ಹಿನ್ನಡೆಯನ್ನು ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಹೇಳಿಕೆಗಳು ಮತ್ತೆ ಮುಳು ಆಗುತ್ತಿವೆಂದು ಹಿರಿಯ ಕಾರ್ಯಕರ್ತರು ಅಸಮಾಧನ ವ್ಯಕ್ತಪಡಿಸಿದರು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!