ಪೂರ್ಲಿಪ್ಪಾಡಿ : ಉಚಿತ ಕಣ್ಣಿನ ಚಿಕಿತ್ಸೆ ಕನ್ನಡಕ ವಿತರಣೆ
ಬಂಟ್ವಾಳ : ಮಾನವ ಬದುಕಿನಲ್ಲಿ ಇತರ ಅಂಗಗಳಂತೆ ಕಣ್ಣು ಮಹತ್ವದ್ದು. ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಕಣ್ಣಿನ ಚಿಕಿತ್ಸೆ ಸುಲಭವಾಗಿದೆ. ನಾವು ಸೇವಾ ಉದ್ದೇಶದಿಂದ ಇಂತಹ ಕೆಲಸಗಳನ್ನು ಹಮ್ಮಿಕೊಂಡಿದ್ದೇವೆ. ಸ್ಥಳೀಯವಾಗಿ ಸಿಗುವ ಸಹಕಾರದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಗುವುದು ಎಂದು ಪುತ್ತೂರು ಆನಂದಾಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ| ಗೌರಿ ಪೈ ಹೇಳಿದರು.
ಅವರು ಕಲ್ಲಡ್ಕ ಪೂರ್ಲಿಪ್ಪಾಡಿ ಶಿವಾಜಿನಗರ ಮರಾಟಿ ಭವನದಲ್ಲಿ ಉಚಿತ ಕಣ್ಣಿನ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನಜಾಗೃತಿ ವೇದಿಕೆ ಬಂಟ್ವಾಳ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಜನನದಿಂದ ಮರಣದ ತನಕ ಕಣ್ಣು ನಿರ್ವಹಿಸುವ ಪಾತ್ರ ಮಹತ್ವದ್ದು. ಬದುಕಿನ ನಂತರ ನಡೆಯುವ ನೇತ್ರದಾನವು ಎರಡು ಜೀವಗಳಿಗೆ ಜಗತ್ತಿನ ಬೆಳಕನ್ನು ತೋರುತ್ತದೆ ಎಂದರು.
ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ ಸಾಮೂಹಿಕ ಶಿಬಿರದ ಮೂಲಕ ಜನರು ಕನಿಷ್ಟ ವೆಚ್ಚದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಗ್ರಾಮಾಭಿವೃದ್ದಿ ಯೋಜನೆ ಇಂತಹ ಸಾಮಾಜಿಕ ಕೆಲಸಗಳಿಗೆ ಮಹತ್ವ ನೀಡುತ್ತದೆ ಎಂದರು.
ಡಾ| ಶಾಂತಾರಾಜ್ ಪ್ರಸ್ತಾವನೆಗೈದು ಆಧುನಿಕ ವ್ಯವಸ್ಥೆಯಲ್ಲಿ ಅಂಗಾಂಗ ದಾನ ಮಹತ್ವವನ್ನು ಪಡೆಯುತ್ತಿದೆ. ವ್ಯಕ್ತಿಯೊಬ್ಬನ ಮರಣಾನಂತರ ದೇಹದಾನ, ಅಂಗದಾನಗಳನ್ನು ಮಾಡಿದರೆ ನಮ್ಮ ಭಾವನಾತ್ಮಕ ಚಿಂತನೆಗೆ ಯಾವುದೇ ಅಡ್ಡಿ ಇಲ್ಲದಂತೆ ಜಾಗೃತೆ ವಹಿಸಲಾಗುತ್ತದೆ ಎಂದು ತಿಳಿಸಿದರು.
ಮರಾಟಿ ಸೇವಾ ಸಂಘದ ಖಜಾಂಚಿ ಉಮೇಶ್ ನಾಯ್ಕ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜನಜಾಗೃತಿ ಕಲ್ಲಡ್ಕ ವಲಯ ಅಧ್ಯಕ್ಷೆ ಜಯಂತಿ ಪೂಜಾರಿ, ಶಿಬಿರ ನಿರ್ದೇಶಕ ಡಾ| ಎ. ಮನೋಹರ್ ರೈ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಜನಜಾಗೃತಿ ಸದಸ್ಯ ಬಟ್ಟಪ್ಪ ಶೆಟ್ಟಿ, ಡಾ| ಸಬಿತಾ ಕುಲಕರ್ಣಿ, ಡಾ| ಕಾರ್ತಿಕ, ಯೋಜನಾಽಕಾರಿ ಮೋಹನ್, ಬಂಟ್ವಾಳ ತಾಲೂಕು ಗ್ರಾಮಾಭಿವೃದ್ದಿ ಯೋಜನಾಽಕಾರಿ ದಯಾನಂದ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕಿ ಪ್ರೇಮಾ ಸ್ವಾಗತಿಸಿ, ವೆಂಟಟ್ರಾಯ ಪ್ರಭು ವಂದಿಸಿದರು. ಗೋಳ್ತಮಜಲು ಗ್ರಾ.ಪಂ. ಸದಸ್ಯ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
ಆನಂದಾಶ್ರಮ ಸೇವಾ ಟ್ರಸ್ಟ್(ರಿ) ಪುತ್ತೂರು, ಕಲ್ಲಡ್ಕ ವಲಯ, ಜನ ಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿ, ಮರಾಟಿ ಸಮಾಜ ಸೇವಾ ಸಂಘ ಕಲ್ಲಡ್ಕ ಜಂಟಿ ಆಶ್ರಯದಲ್ಲಿ ಮರಾಟಿ ಭವನ ಶಿವಾಜಿನಗರ ಪೂರ್ಲಿಪ್ಪಾಡಿ ಕಲ್ಲಡ್ಕದಲ್ಲಿ ಕಾರ್ಯಕ್ರಮ ನಡೆದಿತ್ತು .
ಈ ಶಿಬಿರದಲ್ಲಿ ೩೮೦ ಮಂದಿ ನೋಂದಾಯಿಸಿ ಸದುಪಯೋಗ ಪಡೆದಿದ್ದಾರೆ. ಚಿಕಿತ್ಸೆಗೆ ಬಂದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು.