ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಪ್ಲಮ್ ಹಿತಕಾರಿ
ಬೇಸಿಗೆಯಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳಲು ಸಹಾಯ ಮಾಡುವಂತಹ ಪರಿಣಾಮಕಾರಿ ಹಣ್ಣುಗಳಲ್ಲಿ ಪ್ಲಮ್ ಸಹ ಒಂದು. ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣ ಮಾಡುವಲ್ಲಿ ಇದು ಸಹಕರಿಸುತ್ತದೆ. ಅಲ್ಲದೆ ಮಧುಮೇಹ ಬರುವಂತಹ ಸಂಭವವನ್ನು ಕೂಡ ಕಡಿಮೆ ಮಾಡುತ್ತದೆ. ಈ ಹಣ್ಣಿನ ಸೇವನೆಯು ಮೂಳೆಗಳ ಆರೋಗ್ಯಕ್ಕೆ ಉತ್ತಮವಾದುದು.
ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಪೊಟ್ಯಾಷಿಯಂ ಇರುವುದರಿಂದ ರಕ್ತನಾಳಗಳ ಆರೋಗ್ಯಕ್ಕೆ ಇದು ಸಹಕರಿಸುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಇದು ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಲು ಪ್ಲಮ್ ಹಣ್ಣು ಸಹಕಾರಿಯಾಗಿರುವುದರಿಂದ ತನ್ಮೂಲಕ ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುವುದೊಂದೇ ಅಲ್ಲ; ಒಳ್ಳೆಯ ಕೊಲೆಸ್ಟ್ರಾಲ್ನ್ನು ಹೆಚ್ಚಿಸುವ ಕಾರ್ಯ ಇದರದ್ದು. ನಮ್ಮ ಆಹಾರಪದ್ಧತಿಯಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಆಹಾರ ಪದಾರ್ಥ ಇದು.
ಸಲಾಡ್ಗಳ ತಯಾರಿಕೆಯಲ್ಲಿ ಬಳಸಬಹುದಾಗಿದೆ. ಸ್ಮೂಥಿ, ಜ್ಯೂಸ್ ರುಚಿಕರವಾಗಿರುತ್ತದೆ. ಇದನ್ನು ಸಲಾಡ್ ತಯಾರಿಕೆಯಲ್ಲಿ ಬಳಸುವಾಗ ಪಾಲಕ್ ಬಳಕೆ ಒಳ್ಳೆಯದು. ಬೇಸಿಗೆಯಲ್ಲಿ ಅವಕಾಡೋ ಹಣ್ಣಿನೊಂದಿಗೆ ಸಹ ಇದನ್ನು ಸಲಾಡ್ ಭಾಗವಾಗಿ ಬಳಸಬಹುದು. ಆರೋಗ್ಯಕ್ಕೆ ಇನ್ನಷ್ಟು ಹಿತವಾಗಿರುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ಪ್ಲಮ್ ಬಳಕೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಾಗುತ್ತದೆ. ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. 2017ರಲ್ಲಿ ಜರ್ನಲ್ ಆಫ್ ಒಬೆಸಿಟಿ ಆಂಡ್ ಥೆರಪಿಟಿಕ್ಸ್ನಲ್ಲಿ ಇದರ ಬಗ್ಗೆ ಸಾಕಷ್ಟು ವಿವರಣೆಯನ್ನು ಸಂಶೋಧನಾಪೂರ್ವಕವಾಗಿ ನೀಡಲಾಗಿದೆ. ಇದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ನರಗಳಿಗೆ ಚೈತನ್ಯ ನೀಡಬಲ್ಲದು. ನೆನಪು ಹಾಗೂ ಅರಿವಿನ ಕಾರ್ಯಗಳಿಗೆ ಸಹಕರಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು, ಚರ್ಮದ ಆರೋಗ್ಯಕ್ಕೆ ಪ್ಲಮ್ ಹಿತಕಾರಿ.