ಹೆಬ್ಬಾಲೆ ಪೆಟ್ರೋಲ್ ಬಂಕ್ ಸುಲಿಗೆ ಪ್ರಕರಣ : ನಾಲ್ವರು ಕಳ್ಳರ ಬಂಧನ
ಮಡಿಕೇರಿ: ಕುಶಾಲನಗರ ಸಮೀಪದ ಹೆಬ್ಬಾಲೆಯಲ್ಲಿ ಇತ್ತೀಚೆಗೆ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು,2.50ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಪ್ರವೀಣ್, ಅರಕಲಗೂಡಿನ ಬಿ. ಗಣೇಶ್, ಹುಣಸೂರಿನ ಕುಮಾರ ಹಾಗೂ ಮೈಸೂರು ಹೂಟಗಳ್ಳಿಯ ಆರ್.ಜೆ. ಅಭಿಷೇಕ್ ಬಂಧಿತ ಆರೋಪಿಗಳು. ಅಪರಾಧ ಪ್ರಕರಣವನ್ನು ಪತ್ತೆ ಹಚ್ಚಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಧಿತ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಹುಣಸೂರಿನಲ್ಲಿ ಬೈಕ್ ಕಳ್ಳತನ, ಪೆಟ್ರೋಲ್ ಬಂಕ್ ಸುಲಿಗೆ, ಕೆ.ಆರ್. ನಗರ ಪೆಟ್ರೋಲ್ ಬಂಕ್ ಸುಲಿಗೆ, ಕೆ.ಆರ್.ಪೇಟೆ ಪೆಟ್ರೋಲ್ ಬಂಕ್ ಸುಲಿಗೆ, ಕೆ.ಆರ್.ಸಾಗರ ಮನೆ ದರೋಡೆ, ಬೆಳಕವಾಡಿ ಒಂಟಿ ಮನೆ ಕಳ್ಳತನ, ನಾಗಮಂಗಲದ ಚೀಣ್ಯದ ಕುರಿಗಳ ಕಳ್ಳತನ, ಪಿರಿಯಾಪಟ್ಟಣ ಪೆಟ್ರೋಲ್ ಬಂಕ್ ಸುಲಿಗೆ, ಬೆಂಗಳೂರು ನಗರ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಪ್ರವೀಣ್ ಎಂಬಾತನ ಮೇಲೆ ಶನಿವಾರ ಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
ಜೂನ್ 17 ರಂದು ಕುಶಾಲನಗರ ಗ್ರಾಮಾಂತರ ಪೊಲಿಸ್ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದ ಎ.ಆರ್.ಸರ್ವೀಸ್ ಸ್ಟೇಷನ್ಗೆ ಎರಡು ಬೈಕ್ಗಳಲ್ಲಿ ಪೆಟ್ರೋಲ್ ಹಾಕಿಸುವ ನೆಪದಲ್ಲಿ ಬಂದ ನಾಲ್ವರು ಲಾಂಗ್ನ್ನು ತೋರಿಸಿ ಬೆದರಿಸಿ ಹಣ, ಮೊಬೈಲ್ ಮತ್ತಿತರ ವಸ್ತುಗಳನ್ನು ಸುಲಿಗೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.
ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ರಚನೆಗೊಂಡ ವಿಶೇಷ ಅಪರಾಧ ಪತ್ತೆ ತಂಡ ಜೂ.30 ರಂದು ಹುಣಸೂರಿನ ಕಲ್ಕುಣಿಕೆ ಸರ್ಕಲ್ನಲ್ಲಿ ನಾಲ್ವರನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಮುರುಳೀಧರ ಪಿ.ಕೆ., ತನಿಖಾಧಿಕಾರಿ ದಿನೇಶ್ ಕುಮಾರ್ ಬಿ.ಎಸ್., ಸಿಬ್ಬಂದಿಗಳಾದ ನಂದೀಶ್ ಕುಮಾರ್, ಸದಾಶಿವ, ಅರ್ಚನ, ಸಜಿ ಟಿ.ಎಸ್., ಡಿ.ಆರ್.ಸುದೀಶ್ ಕುಮಾರ್, ದಯಾನಂದ, ಸಂದೇಶ್, ಜೋಸೆಫ್, ಎ.ಮಂಜುನಾಥ್, ಎನ್.ಆರ್.ರಮೇಶ್, ವೈ.ಎಸ್.ನಾಗರಾಜ್, ಪ್ರಕಾಶ್, ಸಂಪತ್ ರೈ, ಕೆ.ಎಸ್. ಸುದೀಶ್ ಕುಮಾರ್, ಅಭಿಷೇಕ್, ಮಣಿಕಂಠ, ಚಂದ್ರು, ವಿವೇಕ, ಚಾಲಕರಾದ ರಾಜು, ರಾಜೇಶ್, ಗಿರೀಶ್, ಬೆರಳಚ್ಚು ವಿಭಾಗದ ಜಯಕುಮಾರ್, ಕಂಟ್ರೋಲ್ ರೂಂನ ಧನಂಜಯ, ಜೋಷಿ ಹಾಗೂ ಜಯಣ್ಣ ಪಾಲ್ಗೊಂಡಿದ್ದರು.
ಇದೇ ಸಂಧರ್ಭ ಅಪರಾಧ ಪ್ರಕರಣವನ್ನು ಪತ್ತೆ ಹಚ್ಚಿರುವ ತನಿಖಾ ತಂಡಕ್ಕೆ ನಗದು ಬಹುಮಾನವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಘೋಷಿಸಿದರು.