“ದೇವರು,ದೇಶವನ್ನು ಪೂಜಿಸುವವರು ಜೀವನದ ಉತ್ತುಂಗಕ್ಕೆ ಏರುವರು” ರತ್ನೋತ್ಸವದಲ್ಲಿ ಪೇಜಾವರ ಶ್ರೀ
ಉಡುಪಿ: ದೇವರ ಅನುಗ್ರಹ ಮತ್ತು ಸಮಾಜದ ಸಹಕಾರವಿಲ್ಲದೆ, ಯಾವ ವ್ಯಕ್ತಿಯೂ ಜೀವನದಲ್ಲಿ ಉತ್ತುಂಗ ಶಿಖರಕ್ಕೆ ಏರಲು ಸಾಧ್ಯವಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಭಾನುವಾರ ನಡೆದ ಉದ್ಯಮಿ ಭುವನೇಂದ್ರ ಕಿದಿಯೂರುಅವರ 75 ರ ಸಂಭ್ರಮ ಮತ್ತು ರತ್ನೋತ್ಸವ- ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಹದ ಪ್ರೀತಿ ಜತೆಗೆ ದೇಶ ಮತ್ತು ದೇವರ ಪ್ರೀತಿಯನ್ನು ಜೀವನದಲ್ಲಿ
ಅಳವಡಿಸಿಕೊಳ್ಳಬೇಕು. ಆಗ ಭಗವಂತನ ಅನುಗ್ರಹ ಪ್ರಾಪ್ತಿ ಆಗುತ್ತದೆ. ದೇವರನ್ನು ನಿತ್ಯಪೂಜೆಸುವವರಿಗೆ ಯಾವುದೇ ಭಯ ಇರುವುದಿಲ್ಲ. ದೇವರಿಂದ ದೂರದವರಿಗೆ ಮಾತ್ರ ಭಯ ಕಾಡುತ್ತದೆ ಎಂದರು.
ಯಾರೂ ಕೂಡ ದೇವರು ಹಾಗೂ ದೇಶವನ್ನು ಮರೆಯಬಾರದು. ಭುವನೇಂದ್ರ ಕಿದಿಯೂರು ಅವರು ತಮ್ಮನ್ನು ದೇವರು ಹಾಗೂ ಜನರ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಇವರಿಗೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಲಿ ಎಂದು ಹಾರೈಸಿದರು. ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಮಾತನಾಡಿ, ಬಡವರು ಹಾಗೂ ದೀನ ದಲಿತರಲ್ಲಿ ಭಗವಂತನ ಸಾನಿಧ್ಯ ಇರುತ್ತದೆ. ಅವರ ಸೇವೆಯನ್ನು ಮಾಡಿದರೆ ಭಗವಂತ ಪೂರ್ಣ ಅನುಗ್ರಹ
ಸಿಗುತ್ತದೆ. ದೇಗುಲದಲ್ಲಿ ದೇವರ ಪೂಜೆ ಮಾಡುವ ಹಾಗೆಯೇ ಸಮಾಜದಲ್ಲಿ ದೀನ ದಲಿತರ ಸೇವೆ ಮಾಡಬೇಕು ಎಂದರು. ವ್ಯಕ್ತಿಯ ಪ್ರತಿಯೊಂದು ನಡೆಯೂ ಪರರಿಗೋಸ್ಕರವಾಗಿರಬೇಕು. ನಾವು ಸಮಾಜ ನೀಡಿದ ವಸ್ತುವಿನಿಂದಲೇ ಇಂದು ಬದುಕುತ್ತಿದ್ದೇವೆ.
ನಾವು ಬಳಸುವ ಪ್ರತಿಯೊಂದು ವಸ್ತು ಸಮಾಜದ ಕೊಡುಗೆ. ಸಮಾಜದ ಋಣದಲ್ಲಿರುವ ನಾವು, ಸಮಾಜಕ್ಕೆ ಏನನ್ನಾದರೂ ನೀಡಿದಾಗ ಮಾತ್ರ ನಮ್ಮ ಜೀವನ ಸಾರ್ಥಕ ಆಗುತ್ತದೆ. ಈ ನಿಟ್ಟಿನಲ್ಲಿ ಭುವನೇಂದ್ರ ಕಿದಿಯೂರು ಎಲ್ಲರಿಗೂ
ಮಾದರಿಯಾಗಿದ್ದು, ಬದುಕಿನಲ್ಲಿ ಅವರು ಯಾವತ್ತು ಸುಮ್ಮನೆ ಕುಳಿತವರಲ್ಲ. ನಿರಂತರವಾಗಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಸಹಕುಲಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಧರ್ಮಗುರು ಫಾ. ವಲೇರಿಯನ್ ಮೆಂಡೊನ್ಸಾ, ಹಿರಿಯ ಜ್ಯೋತಿಷ್ಯ ವಿದ್ವಾಂಸ ಕಬಿಯಾಡಿ ಜಯರಾಮ ಆಚಾರ್ಯ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವಾ, ಗೀತಾನಂದ ಫೌಂಡೇಶನ್‌ನ ಆನಂದ ಸಿ. ಕುಂದರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಸತೀಶ್ ಪೈ, ಸಂಧ್ಯಾ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭುವನೇಂದ್ರ ಕಿದಿಯೂರು ರವರ ಪತ್ನಿ ಹೀರಾ ಬಿ. ಕಿದಿಯೂರು, ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀಕೃಷ್ಣ ದೇವರ ಪರಮ ಭಕ್ತರಾಗಿರುವ ಭುವನೇಂದ್ರ ಕಿದಿಯೂರು ರವರನ್ನು , ಶ್ರೀಕೃಷ್ಣ ಮಠದ ದಿವಾನರಾದ ಶ್ರೀಶ ಭಟ್ ಕಡೆಕಾರ್ ಮತ್ತು ವಾಸುದೇವ್ ಭಟ್ ನೇತೃತ್ವದಲ್ಲಿ ರಕ್ತ ಚಂದನದ ಶ್ರೀಕೃಷ್ಣ ದೇವರ ವಿಗ್ರಹವನ್ನು ಚೆಂಡೆ ವಾದ್ಯದೊಂದಿಗೆ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಸಭಾಂಗಣಕ್ಕೆ ಪ್ರವೇಶಿಸಿ, ಶ್ರೀಕೃಷ್ಣ ಮಠದ ಪರವಾಗಿ ಪೇಜಾವರ ಸ್ವಾಮೀಜಿಗಳು ಸನ್ಮಾನಿಸಿದರು.
ಭುವನೇಂದ್ರ ಕಿದಿಯೂರು ಅಭಿನಂದನಾ ಸಮಿತಿಯ ಅಧ್ಯಕ್ಷ ಜಿ. ಶಂಕರ್ ಸ್ವಾಗತಿಸಿದರು. ಉಪಾಧ್ಯಕ್ಷ ಹರಿಯಪ್ಪ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ನಿರೂಪಿಸಿದರು. ಕೆ. ಗಣೇಶ್ ರಾವ್ ವಂದಿಸಿದರು.
ಭುವನೇಂದ್ರ ಕಿದಿಯೂರು ರತ್ನೋತ್ಸವ ಅಭಿನಂದನಾ ಸಮಿತಿಯ ಪರವಾಗಿ ಬೆಳ್ಳಿಯ ಅಭಿನಂದನಾ ಪತ್ರ ಸನ್ಮಾನದ ವಿಶೇಷತೆಯಾಗಿತ್ತು.
ಅಭಿನಂದನಾ ಸಮಾರಂಭದ ಮೊದಲು ಶ್ರುತಿ ಮ್ಯೂಸಿಕ್ ಎರ್ಮಾಳ್, ಚಂದ್ರಶೇಖರ್ ಮತ್ತು ಬಳಗ ಇವರಿಂದ ವಾದ್ಯ ಸಂಗೀತ ಕಾರ್ಯಕ್ರಮ ಜರಗಿತು. ಸಮಾರಂಭದ ಕೊನೆಯಲ್ಲಿ ಭುವನೇಂದ್ರ ಕಿದಿಯೂರು ಅವರ ಅಭಿಮಾನಿಗಳು ಮತ್ತು ಸಂಘ ಸಂಸ್ಥೆಗಳು ಭುವನೇಂದ್ರ ಕಿದಿಯೂರು ಅವರನ್ನು ನೆನಪಿನ ಕಾಣಿಕೆ ಫಲಪುಷ್ಪ ಹಾರಗಳೊಂದಿಗೆ ಅಭಿನಂದಿಸಿದರು.
ಪ್ರಮುಖರಾದ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉದ್ಯಮಿಗಳಾದ ಜೆರಿ ವಿನ್ಸೆಂಟ್ ಡಯಾಸ್, ಗ್ಲೆನ್ ಡಾಯಸ್, ಮನೋಹರ್ ಎಸ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಯಶ್ಪಾಲ್ ಸುವರ್ಣ , ಸುರೇಶ್ ಶೆಟ್ಟಿ ಗುರ್ಮೆ, ಅಬ್ದುಲ್ ಜಲೀಲ್ ಸಾಹೇಬ್ ರಮೇಶ್ ಕಾಂಚನ್, ಮಟ್ಟಾರ್ ರತ್ನಾಕರ ಹೆಗ್ಡೆ, ಅಶೋಕ್ ಕುಮಾರ್ ಕೊಡವೂರು, ಸಾಹಿತಿ ಅಂಬಾತನಯ ಮುದ್ರಾಡಿ, ಯುವರಾಜ್ ಸಾಲ್ಯಾನ್ ಮಸ್ಕತ್, ನಿರುಪಮಾ ಪ್ರಸಾದ್, ಶಿಲ್ಪಾ ಜಿ ಸುವರ್ಣ, ಡಾ. ಹರಿಶ್ಚಂದ್ರ, ದಿನೇಶ್ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು