ನಿಯಮ ಮೀರಿ ಪ್ರಯಾಣಿಕರ ಸಾಗಾಟ:ಬಸ್ ವಶಕ್ಕೆ
ಉಡುಪಿ: ಉಡುಪಿಯಿಂದ ಮಂಗಳೂರಿಗೆ ನಿಯಮ ಮೀರಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಬಸ್ಸನ್ನು ಉಡುಪಿ ಸಂಚಾರಿ ಪೊಲೀಸರು ವಶಕ್ಕೆ ಪಡೆದು ಚಾಲಕನ ಲೈಸನ್ಸ್ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ.
ಕಳೆದ ಸೆ.21 ರಂದು ರಾತ್ರಿ 9.30 ಕ್ಕೆ ಉಡುಪಿಯಿಂದ ಮಂಗಳೂರಿಗೆ ಹೊರಟ ಎಕೆಎಮ್ಎಸ್ ಖಾಸಗಿ ಬಸ್ಸು ನಿಯಮಕ್ಕಿಂತ ಹೆಚ್ಚುವರಿ ಪ್ರಯಾಣಿಕರನ್ನು ಸಾಗಿಸಿದ್ದು ಮಾತ್ರವಲ್ಲದೆ ಪ್ರಯಾಣಿಕರು ಪುಟ್ ಬೋರ್ಡ್, ಬಸ್ಸಿನ ಹಿಂಭಾಗದ ಏಣಿಯಲ್ಲಿ ಮತ್ತು ಮೇಲ್ಬಾಗದಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿರುವ ಬಗ್ಗೆ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು ಬಸ್ಸ ಚಾಲಕ ಶೈಲೇಶ್ ಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ, ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ರಿ ಬಸ್ಸನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದ್ದು, ಬಸ್ಸಿನ ಚಾಲಕ ಶೈಲೇಶ್ ಲೈಸನ್ಸ್ ಅಮಾನತಿಗೆಆರ್ ಟಿ ಓ ಗೆ ಶಿಫಾರಸ್ಸು ಮಾಡಲಾಗಿದೆ.
ಬಸ್ಸ್ ಚಾಲಕನ ನಿರ್ಲಕ್ಷ್ಯ ಚಾಲನೆಗೆ 13,500 ಸಾವಿರ ರೂ. ದಂಡ ವಿಧಿಸಲಾಗಿದೆ ಹಾಗೂ ಬಸ್ಸಿನ ಮಾಲಕರಿಗೆ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ನೋಟೀಸು ನೀಡಲಾಗಿದೆ.