ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ- ಸಿ ಎಂ ವಿವಾದಾತ್ಮಕ ಹೇಳಿಕೆ
ಶಿವಮೊಗ್ಗ: ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ, ಸ್ವಲ್ಪ ಎಚ್ಚರಿಕೆಯಿಂದ ಅಂಕಿ ಅಂಶ ಕೊಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೀಡಾಗಿದೆ.
ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಸಿದ ಅವಾಂತರಕ್ಕೆ ಪರಿಹಾರ ಸಿಕ್ಕಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಅಧಿಕಾರಗಳ ಜೊತೆ ನೆರೆ ವಿಚಾರವಾಗಿ ಸಭೆ ನಡೆಸುವಾಗ ಸಿಎಂ ವಿವಾದ ಎಬ್ಬಿಸುವ ಹೇಳಿಕೆ ಕೊಟ್ಟಿದ್ದಾರೆ.
ಪ್ರವಾಹದಿಂದ ಬೆಳೆ ನಾಶವಾಗಿದೆ ಎಂದು ಹೇಳುತ್ತಿದ್ದೀರಿ. ಆದರೆ ನೀರು ಇಳಿದ ಮೇಲೆ ನಾಶವಾಗದೇ ಇರುವ ಬೆಳೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ. ಸರ್ಕಾರಕ್ಕೆ ನೋಟ್ ಪ್ರಿಂಟ್ ಮಾಡೋಕೆ ಆಗಲ್ಲ ಎಂದು ಸಿಎಂ ಹೇಳಿದ್ದಾರೆ.
ಎಷ್ಟು ನಷ್ಟವಾಗಿದೆ ಎನ್ನುವ ಅಂಕಿ ಅಂಶವನ್ನು ಎಚ್ಚರಿಕೆಯಿಂದ ಕೊಡಿ. ಸಮಾಧಾನವಾಗಿ ಒಂದು ವಾರ ಕಾಯಿರಿ, ಬಿಸಿಲು ಬೀಳಲಿ, ನೀರೆಲ್ಲಾ ಕಡಿಮೆಯಾಗಲಿ. ಆಮೇಲೆ ನಿಮ್ಮ ಲೆಕ್ಕಾಚಾರ ಕೊಡಿ. ಟೇಕ್ ಯುವರ್ ಓನ್ ಟೈಂ. ನಾವೇನು ಅರ್ಜೆಂಟ್ ಮಾಡಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದ ಜನತೆ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ. ತಾವು ಕಷ್ಟಪಟ್ಟು ಮಾಡಿದ್ದ ಆಸ್ತಿಪಾಸ್ತಿ, ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ವೇಳೆ ಸಿಎಂ ಪರಿಹಾರ ನೀಡಲು ಈ ರೀತಿ ಹೇಳಿಕೆ ಕೊಟ್ಟಿರುವುದು ಸಂತ್ರಸ್ತರ ಸಿಟ್ಟಿಗೆ ಕಾರಣವಾಗಿದೆ.